ಕಸ ಘಟಕ ಬಂದ್‌ಗೆ ಪಟ್ಟು, ಡಾ.ಹನುಮಂತನಾಥ ಸ್ವಾಮೀಜಿ ಭಾಗಿ ಡಿಸಿಯಿಂದ ಅಗತ್ಯಕ್ರಮದ ಭರವಸೆ

6 DBP 3 BBMP
Published on

ದೊಡ್ಡಬಳ್ಳಾಪುರ: ಈ ಹಿಂದೆ ಟೆರ‌್ರಾರ್ಮಾ ಬಂದ್‌ಗಾಗಿ ನಡೆಸಿದ ಧರಣಿಯಿಂದಾಗಿ ಅಂದಿನ ಸಿಎಂ ಸಿದ್ದರಾಮಯ್ಯ 2016ರ ಮಾರ್ಚ್ ಅಂತ್ಯಕ್ಕೆ ಘಟಕ ಸ್ಥಗಿತಗೊಳಿಸಿದ್ದರು. ಜತೆಗೆ ಎಂಎಸ್‌ಜಿಪಿ ಘಟಕವನ್ನು ವರ್ಷದೊಳಗೆ ಸ್ಥಗಿತಗೊಳಿಸುವ ಭರವಸೆ ನೀಡಿದ್ದರು.

ಆದರೆ ಇದೆಲ್ಲ ಸುಳ್ಳಾಗಿದೆ ಎಂದು ಕೊರಟಗೆರೆ ತಾಲೂಕಿನ ಎಲೆರಾಂಪುರದ ಕುಂಚಿಟಿಗರ ಮಠದ ಡಾ.ಹನುಮಂತನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಕಸ ಹಾಕಬಾರದು ಹಾಗೂ ಗುಂಡ್ಲಹಳ್ಳಿಯ ಟೆರ‌್ರಾರ್ಮಾ ಘಟಕ ಮತ್ತೆ ಆರಂಭಿಸದಂತೆ ಆಗ್ರಹಿಸಿ ಬಿಬಿಎಂಪಿ ತ್ಯಾಜ್ಯ ಸಂಗ್ರಹಣಾ ಘಟಕ ವಿರೋಧಿ ಹೋರಾಟ ಸಮಿತಿ ಶುಕ್ರವಾರದಿಂದ ಆರಂಭಿಸಿರುವ ಅನಿರ್ದಿಷ್ಟವಾಧಿ ಧರಣಿಯಲ್ಲಿ ಮಾತನಾಡಿದರು.

ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ನೀಡಿದ್ದ ಭರವಸೆ ಸುಳ್ಳಾಗಿವೆ. ಹೀಗಾಗಿ ನಾವು ಯಾರ ಮಾತನ್ನೂ ನಂಬುವುದಿಲ್ಲ. ಯಾವುದೇ ಉನ್ನತ ಮಟ್ಟದ ಸಭೆ ನಡೆಯಬೇಕಿದ್ದರೂ ಧರಣಿ ಸ್ಥಳದಲ್ಲೇ ಎಲ್ಲರ ಸಮ್ಮುಖದಲ್ಲಿ ನಡೆಯಬೇಕು. ಎರಡೂ ಕಸ ಘಟಕ ಬಂದ್ ಮಾಡಬೇಕು ಎನ್ನುವ ನಿರ್ಧಾರ ಅಚಲವಾಗಿದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಶಾಸಕ ಟಿ.ವೆಂಕಟರಮಣಯ್ಯ, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್.ಅಶ್ವತ್ಥನಾರಾಯಣ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳದಲ್ಲೇ ಅಡುಗೆ: ರಾತ್ರಿ ಧರಣಿಯಲ್ಲಿ ಭಾಗವಹಿಸುವ ಪ್ರತಿಭಟನಾಕಾರರಿಗೆ ಸ್ಥಳದಲ್ಲೇ ಅಡುಗೆ ತಯಾರಿ ನಡೆದಿದೆ. ಬಿಬಿಎಂಪಿ ಕಸ ವಿಲೇವಾರಿ ಘಟಕಗಳಿಗೆ ಕಸ ತುಂಬಿದ ಲಾರಿಗಳು ಹೋಗುವ ರಸ್ತೆಯಲ್ಲೇ ಪೆಂಡಾಲ್ ಹಾಕಿ ಧರಣಿ ನಡೆಸುತ್ತಿರುವುದರಿಂದ ಬೆಂಗಳೂರಿನಿಂದ ಕಸ ತುಂಬಿಕೊಂಡು ಬರುವ ಲಾರಿಗಳು ಸ್ಥಗಿತಗೊಂಡಿವೆ.

ಇಲ್ಲಿನ ಟೆರ‌್ರಾರ್ಮಾ ಹಾಗೂ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಗಳ ಸಮಸ್ಯೆಗಳ ಕುರಿತು ಶೀಘ್ರವೇ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ ಟೆರ‌್ರಾರ್ಮಾ ಆರಂಭಿಸಲು ಪ್ರಸ್ತಾವನೆ ಬಂದಿದೆ. ಆದರೆ ಸರ್ಕಾರವಾಗಲಿ, ಬಿಬಿಎಂಪಿ ಆಗಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಲ್ಲಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಉನ್ನತ ಹಂತದ ಸಭೆ ನಡೆಸಲಾಗುವುದು. ಸರ್ಫರಾಜ್‌ಖಾನ್, ಬಿಬಿಎಂಪಿ ಜಂಟಿ ಆಯುಕ್ತ ಇಲ್ಲಿನ ಪರಿಸರ ತುಂಬಾ ಹಾಳಾಗುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ನಗರದ ತ್ಯಾಜ್ಯದಂದು ಗ್ರಾಮೀಣ ಪ್ರದೇಶವನ್ನು ಹಾಳು ಮಾಡುತ್ತಿರುವುದು ಖಂಡನೀಯ. ಇಲ್ಲಿನ ಎರಡೂ ಘಟಕಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ಜಯಮ್ಮಲಕ್ಷ್ಮೀನಾರಾಯಣ, ಜಿಪಂ ಅಧ್ಯಕ್ಷೆ

ಬಿಬಿಎಂಪಿಗೆ ಧಿಕ್ಕಾರ: ಇಲ್ಲಿನ ಎರಡೂ ಘಟಕಗಳಿಗೆ ಕಸ ಸುರಿಯುವುದನ್ನು ಬಂದ್ ಮಾಡುವ ಭರವಸೆ ಬಿಟ್ಟು ಬೇರಾವುದೇ ಸಭೆ ನಡೆಸುವ ಅಗತ್ಯವೇ ಇಲ್ಲ ಎಂದ ಪ್ರತಿಭಟನಾಕಾರರು ಬಿಬಿಎಂಪಿ ವಿರುದ್ಧ ಧಿಕ್ಕಾರ ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net