ಕಾರ್ಯಪ್ಪ ಕಾಲೇಜಿಗಿಲ್ಲ ಅಮೃತ ಸಂಭ್ರಮ

Karyappa College
Published on

ಮಡಿಕೇರಿ:

ಮುಂದಿನ ವರ್ಷಕ್ಕೆ ಅಮೃತಮಹೋತ್ಸವ ಆಚರಣೆಯ ಸಂಭ್ರಮದಲ್ಲಿ ಇರಬೇಕಾಗಿದ್ದ ಮಡಿಕೇರಿಯ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಈಗ ಆ ಕಳೆಯೇ ಕಂಡುಬರುತ್ತಿಲ್ಲ. ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ್ದ ಈ ಕಾಲೇಜು ಈಗ ನೂತನವಾಗಿ ಆರಂಭವಾಗಿರುವ ಕೊಡಗು ವಿವಿಯ ತೆಕ್ಕೆಗೆ ಬಿದ್ದ ಮೇಲೆ ನಿರ್ವಹಣೆಯೇ ಇಲ್ಲದಂತಾಗಿದೆ. ಎಫ್‌ಎಂಸಿ ಕಾಲೇಜಿಗೆ ಸಂಬಂಧಿಸಿದಂತೆ ಮಂಗಳೂರು ವಿವಿ ತನ್ನೆಲ್ಲಾ ಜವಾಬ್ದಾರಿಗಳನ್ನು ಕಳೆದುಕೊಳ್ಳುತ್ತಿದ್ದು, ಉಪನ್ಯಾಸಕರು ಮತ್ತು ಸಿಬ್ಬಂದಿಗೆ ವೇತನವೂ ಪಾವತಿ ಆಗುತ್ತಿಲ್ಲ.

ನ್ಯಾಕ್ ಮೌಲ್ಯಮಾಪನ ಮತ್ತು ಮಾನ್ಯತೆ ಪ್ರಕ್ರಿಯೆಗೆ ಒಳಪಟ್ಟ ಕೊಡಗಿನ ಮೊದಲ ಸಂಸ್ಥೆ ಹೆಗ್ಗಳಿಕೆಯ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಈಗ ಒಂದು ರೀತಿಯ ಆತಂಕದ ಕಾರ್ಮೋಡ. ೨೦೨೦-೨೦೨೫ರ ಅವಧಿಗೆ ನ್ಯಾಕ್ ಬಿ ++ ಗ್ರೇಡ್ ಮತ್ತು ಸಿಜಿಪಿಎ ೨.೮೫ ಹೊಂದಿರುವ ಈ ಕಾಲೇಜಿನಲ್ಲಿ ಮೂಲಭೂತ ವ್ಯವಸ್ಥೆಗಳೇ ಸರಿಯಾಗಿಲ್ಲ. ಇದನ್ನು ಸರಿದಾರಿಗೆ ತರಬೇಕಾದವರು ಯಾರು ಎನ್ನುವ ಪ್ರಶ್ನೆಗೆ ಉತ್ತರವೂ ಸಿಗುತ್ತಿಲ್ಲ. ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜು ಆಗಿರುವ ಎಫ್‌ಎಂಸಿ ಕಾಲೇಜು ಈಗ ನೂತನ ಕೊಡಗು ವಿವಿ ಅಧೀನದಲ್ಲಿದ್ದು, ಮಾತೃ ವಿವಿ ಬಹುತೇಕ ಕೈ ಚೆಲ್ಲಿದೆ. ಹೊಸ ವಿಶ್ವವಿದ್ಯಾಲಯಕ್ಕೆ ಹಣಕಾಸಿನ ಕೊರತೆ ಕಾಡುತ್ತಿದೆ.

ಎಂ.ಸಿ. ನಾಣಯ್ಯ, ಎ.ಕೆ. ಸುಬ್ಬಯ್ಯ, ಕೆ.ಜಿ. ಬೋಪಯ್ಯ, ಬಿ.ಎ. ಜೀವಿಜಯರಂತಹ ಜನಪ್ರಿಯ ರಾಜಕಾರಣಿಗಳು, ಅಮೇರಿಕಾದಲ್ಲಿ ವಿಜ್ಞಾನಿ ಆಗಿರುವ ಡಾ. ಜಗದೀಶ್ ಮೂಡೇರ, ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಡಾ. ಕೋಡಿ ಕುಶಾಲಪ್ಪ ಗೌಡ, ಪ್ರೊ. ಕೆ.ಎಂ. ಕಾವೇರಪ್ಪ, ಹಾಕಿ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಪಿ. ಗಣೇಶ್ ಸೇರಿದಂತೆ ಖ್ಯಾತನಾಮರನ್ನು ದೇಶಕ್ಕೆ ಕೊಟ್ಟಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸ್ಥಾಪನೆ ಹಿಂದೆಯೂ ರೋಚಕ ಇತಿಹಾಸವಿದೆ.

ಕೊಡಗಿನಲ್ಲಿ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂಸ್ಥೆ ಸ್ಥಾಪಿಸುವುದಕ್ಕೆ ೧೯೪೧ರಲ್ಲೇ ಪ್ರಯತ್ನಗಳು ಆರಂಭವಾಗಿದ್ದವು. ಅಂದಿನ ಕೊಡಗು ವಿಧಾನಸಭೆಯಲ್ಲಿ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಿದರೂ ಹಣಕಾಸಿನ ಅಡಚಣೆಯಿಂದಾಗಿ ಯೋಜನೆ ಕೈಗೂಡಿರಲಿಲ್ಲ. ಸ್ವಾತಂತ್ರ್ಯಾನಂತರ ಆಗ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗಿನಲ್ಲಿ ೧೯೪೯ರಲ್ಲಿ ಇಂಟರ್‌ಮೀಡಿಯೇಟ್ ಕೋರ್ಸ್ ಆರಂಭಿಸಲು ಅಂದಿನ ಮದ್ರಾಸ್ ವಿವಿ ಅನುಮತಿ ಕೊಟ್ಟಿತು. ಅದರಂತೆ ೧೯೪೯ರ ಜೂ.೩೦ಕ್ಕೆ ಸೆಂಟ್ರಲ್ ಹೈಸ್ಕೂಲ್ ಕಟ್ಟಡದಲ್ಲಿ ಸಂಸ್ಥೆ ಆರಂಭವಾಯಿತು.

೧೯೫೩-೫೪ರಲ್ಲಿ ಈಗಿನ ಕಟ್ಟಡಕ್ಕೆ ಸಂಸ್ಥೆ ಸ್ಥಳಾಂತರಗೊಂಡಿತು. ಸಿ ರಾಜ್ಯವಾಗಿದ್ದ ಕೊಡಗು ೧೯೫೬ರಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಸೇರ್ಪಡೆ ಆಗುವ ಸಂದರ್ಭದಲ್ಲಿ ಈ ಸಂಸ್ಥೆ ಮದ್ರಾಸ್ ವಿವಿಯಿಂದ ಮೈಸೂರು ವಿವಿಯಲ್ಲಿ ಸಂಯೋಜನೆಗೊಂಡಿತು. ೧೯೮೦-೮೧ರಲ್ಲಿ ಮಂಗಳೂರು ವಿವಿಗೆ ಸೇರ್ಪಡೆ ಆಯಿತು. ೧೯೯೩ರಲ್ಲಿ ಮಂಗಳೂರು ವಿವಿಯ ಘಟಕ ಕಾಲೇಜು ಆಗಿ ಸಂಸ್ಥೆ ಸೇರ್ಪಡೆ ಆಯಿತು. ದೇಶ ಕಂಡ ಮಹಾನ್ ಸೇನಾನಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ೧೯೯೪ರಲ್ಲಿ ಈ ಸಂಸ್ಥೆಗೆ ಇಡಲಾಯಿತು. ೧೯೯೭ರಿಂದ ಇಲ್ಲಿ ಸ್ನಾತಕೋತ್ತರ ಕೋರ್ಸ್‌ಗಳೂ ಆರಂಭವಾದವು. ಅಮೃತಮಹೋತ್ಸವ ಆಚರಣೆಗೆ ಸಿದ್ಧವಾಗಬೇಕಿದ್ದ ಇಂತಹ ಭವ್ಯ ಇತಿಹಾಸ ಹೊಂದಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಈಗ ಅತಂತ್ರ ಸ್ಥಿತಿ ಎದುರಿಸುತ್ತಿದೆ.

ಕೊಡಗು ವಿಶ್ವವಿದ್ಯಾಲಯ ಅಧಿಕೃತವಾಗಿ ತನ್ನ ಚಟುವಟಿಕೆಗಳನ್ನು ಆರಂಭಿಸುತ್ತಿದ್ದಂತೆಯೇ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜನ್ನು ಮಂಗಳೂರು ವಿವಿ ಹಂತ ಹಂತವಾಗಿ ದೂರ ತಳ್ಳುತ್ತಾ ಬರುತ್ತಿದೆ. ೭೪ ವರ್ಷಗಳ ಇತಿಹಾಸ ಇರುವ ಕಾಲೇಜು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಮಡಿಕೇರಿಯ ಕುಂಭದ್ರೋಣ ಮಳೆಗೆ ಕಾಲೇಜು ಕಟ್ಟಡ ಬಹುತೇಕ ಶಿಥಿಲವಾಗಿದೆ. ಕೊಡಗಿನ ಹವಾಮಾನಕ್ಕೆ ಕಾಲೇಜು ಕಟ್ಟಡ ಇಷ್ಟು ಅವಧಿಯ ತನಕ ಉಳಿದುಕೊಂಡಿರುವುದೇ ದೊಡ್ಡದು ಎನ್ನುವ ಮಾತುಗಳೂ ಕೇಳಿಬರುತ್ತಿದೆ. ಮಳೆ ಬಂದರೆ ಸೋರುವ ಹೆಂಚುಗಳು, ನೀರಿಳಿಯುತ್ತಿರುವ ಗೋಡೆಗಳ ಮಧ್ಯೆ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುವ ಸ್ಥಿತಿ ಇಲ್ಲಿದೆ.

ಗ್ರಂಥಾಲಯ ದ್ವಾರದ ಷಟರ್ ಕೆಲ ದಿನಗಳ ಹಿಂದಷ್ಟೇ ಜಾರಿ ಕೆಳಗೆ ಬೀಳುವ ಹಾಗೆ ಆಗಿದೆ. ತರಗತಿ ಕೊಠಡಿಗಳಲ್ಲಿ ಇಲಿ, ಹೆಗ್ಗಣಗಳು ಓಡಾಡುವುದು ಸಾಮಾನ್ಯವಾಗಿದೆ. ಇಂಥ ಕೊಠಡಿಗಳಲ್ಲೇ ಪಾಠಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೆಲವು ಭಾಗಗಳಲ್ಲಿ ಛಾವಣಿ ಕುಸಿದು ಯಾವಾಗ ತಲೆ ಮೇಲೆ ಬೀಳುತ್ತದೋ ಎನ್ನುವ ಆತಂಕದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಮೇಲೆ ನೋಡಿಕೊಂಡೇ ಓಡಾಡುವಂತಾಗಿದೆ. ಮಂಗಳೂರು ವಿವಿಯಂತೂ ಈಗಾಗಲೇ ಜವಾಬ್ದಾರಿ ಕಳಚಿಕೊಂಡು ಆಗಿದೆ. ಕೊಡಗು ವಿವಿ ಅನುದಾನಕ್ಕಾಗಿ ಸರ್ಕಾರದ ಕಡೆಗೆ ನೋಡುತ್ತಿದೆ. ಹಾಗಾಗಿ ದುರಸ್ತಿಯ ’ಗ್ಯಾರಂಟಿ’ ಸದ್ಯಕ್ಕಂತೂ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.

ಉಪನ್ಯಾಸಕರು ಮತ್ತು ಸಿಬ್ಬಂದಿ ಪರಿಸ್ಥಿತಿ ತೀರಾ ಸಂಕಷ್ಟದಲ್ಲಿದೆ. ಸರಿಯಾದ ಸಮಯಕ್ಕೆ ವೇತನ ಬರುತ್ತಿಲ್ಲ. ಅತಿಥಿ ಉಪನ್ಯಾಸಕರು ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿ ಸ್ಥಿತಿಯಂತೂ ಶೋಚನೀಯವಾಗಿದೆ. ಕಳೆದ ೪ ತಿಂಗಳಿನಿಂದ ಅತಿಥಿ ಉಪನ್ಯಾಸಕರಿಗೆ ವೇತನ ಸಿಕ್ಕಿಲ್ಲ. ಇಲ್ಲಿರುವ ಕೆಲಸದ ಒತ್ತಡಕ್ಕೆ ಸರಿಯಾಗಿ ಅವಶ್ಯಕವಿರುವ ಉಪನ್ಯಾಸಕರ ನೇಮಕ ಆಗಿಲ್ಲ. ಇಲ್ಲಿ ಕೆಲಸ ಮಾಡುತ್ತಿದ್ದ ಹಲವರನ್ನು ಈ ವರ್ಷ ಕೆಲಸದಿಂದ ತೆಗೆಯಲಾಗಿದೆ.

ಉಳಿದುಕೊಂಡಿರುವ ಉಪನ್ಯಾಸಕರು ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಇದರಿಂದ ಕಾಲೇಜಿನ ಪಾಠ ಪ್ರವಚನಗಳಿಗೆ ಸಮಸ್ಯೆ ಆಗಿದೆ. ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಹಲವು ವರ್ಷಗಳಿಂದ ಪರೀಕ್ಷಾ ಮೇಲ್ವಿಚಾರಣೆಯ ಗೌರವಧನ ಸಿಗುತ್ತಿಲ್ಲ. ಕೊರೊನಾ ಸಂದರ್ಭ ಸಂಬಳವನ್ನು ಕಂತುಗಳಾಗಿ ಕೊಡುವ ಭರವಸೆ ಸಿಕ್ಕಿತ್ತು. ಅದರಂತೆ ಒಂದು ಕಂತು ಮಾತ್ರ ಸಿಕ್ಕಿದೆ. ಉಳಿದ ಮೂರು ತಿಂಗಳ ವೇತನ ಸಿಗಲೇ ಇಲ್ಲ. ಬಾಕಿ ವೇತನವನ್ನೂ ಕೊಡದೆ ಹಲವು ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಸಾಮಾನ್ಯವಾಗಿ ವಿದ್ಯಾಸಂಸ್ಥೆಗಳಲ್ಲಿ ವರ್ಷದಿಂದ ವರ್ಷಕ್ಕೆ ಕೋರ್ಸ್‌ಗಳ ಸಂಖ್ಯೆ ಹೆಚ್ಚಿಸುತ್ತಾ ಹೋಗಲಾಗುತ್ತದೆ. ಆದರೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಪ್ರತಿ ವರ್ಷವೂ ಒಂದೊಂದಾಗಿ ಕೋರ್ಸ್‌ಗಳ ಸಂಖ್ಯೆ ಕಡೆಮೆಯಾಗುತ್ತಿದೆ. ಇದನ್ನೆಲ್ಲಾ ಗಮನಿಸುತ್ತಿರುವ ಇಲ್ಲಿಯ ಉಪನ್ಯಾಸಕರು ಹೊಸ ವಿವಿ ಸ್ಥಾಪನೆಯಾಗಿದ್ದಕ್ಕೆ ಸಂಭ್ರಮಿಸಬೇಕೋ ಅಥವಾ ದುಃಖಿಸಬೇಕೋ ಎನ್ನುವ ಗೊಂದಲದಲ್ಲಿ ಇದ್ದಾರೆ.

ಕೊಡಗು ವಿವಿ ಮೂಲಗಳ ಪ್ರಕಾರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಈಗ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಜವಾಬ್ದಾರಿ ಮಾತ್ರ ಕೊಡಗು ವಿವಿಗೆ ಸೇರಿದೆ. ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಅತಿಥಿ ಉಪನ್ಯಾಸಕರ ನೇಮಕ ನಡೆಯುತ್ತದೆ. ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಯೋಗಕ್ಷೇಮ ಮಂಗಳೂರು ವಿವಿಗೆ ಸೇರಿದ್ದು, ಅವರ ಎಲ್ಲಾ ಬೇಕು, ಬೇಡಿಕೆಗಳು ಮಂಗಳೂರು ವಿವಿ ವ್ಯಾಪ್ತಿಗೆ ಬರುತ್ತದೆ. ಇವರಿಗೆ ಪಾಠ ಪ್ರವಚನ ನಿಭಾಯಿಸುವ ಹೊಣೆಗಾರಿಕೆಯನ್ನು ಇಲ್ಲಿರುವ ಕಾಯಂ ಉಪನ್ಯಾಸಕರಿಗೆ ಕೊಡಲಾಗಿದೆ. ಇವರಿಗೆ ಪದವಿ ಪ್ರಮಾಣ ಪತ್ರವೂ ಅಲ್ಲಿಂದಲೇ ಬರುತ್ತದೆ. ಸ್ನಾತಕೋತ್ತರ ಪ್ರಥಮ ವರ್ಷಕ್ಕೆ ಇನ್ನೂ ಅಧಿಕೃತವಾಗಿ ಪ್ರವೇಶ ಪ್ರಕ್ರಿಯೆ ನಡೆದಿಲ್ಲ. ದ್ವಿತೀಯ ವರ್ಷದ ವಿದ್ಯಾರ್ಥಿಗಳ ಜವಾಬ್ದಾರಿಯೂ ಮಂಗಳೂರು ವಿವಿಗೆ ಪಾಲಿಗೆ ಹೋಗುತ್ತದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಈಗ ಯಾವುದೇ ಖರ್ಚು ಬಂದರೂ ಅದರಲ್ಲಿ ೩ರಲ್ಲಿ೨ ಭಾಗ ಮಂಗಳೂರು ವಿವಿಯೇ ಭರಿಸಬೇಕಾಗುತ್ತದೆ. ೧ ಭಾಗ ಮಾತ್ರ ಕೊಡಗು ವಿವಿ ಭರಿಸಲಿದೆ. ಮುಂದಿನ ವರ್ಷ ೩ರಲ್ಲಿ ೨ ಭಾಗ ಕೊಡಗು ವಿವಿ ಮತ್ತು ೧ ಭಾಗ ಮಂಗಳೂರು ವಿವಿಗೆ ಹೋಗುತ್ತದೆ. ಮೂರನೇ ವರ್ಷದಿಂದ ಎಲ್ಲಾ ಜವಾಬ್ದಾರಿಗಳೂ ಕೊಡಗು ವಿವಿ ಹೊತ್ತುಕೊಳ್ಳಲಿದೆ. ವಿಶೇಷ ಎಂದರೆ ಕೊಡಗು ವಿವಿಯ ಕುಲಪತಿ, ರಿಜಿಸ್ಟ್ರಾರ್ ಸೇರಿ ಕಾಯಂ ಸಿಬ್ಬಂದಿಗೆ ಕಳೆದ ೬ ತಿಂಗಳಿನಿಂದ ವೇತನವೇ ಬಂದಿಲ್ಲ ಎನ್ನಲಾಗುತ್ತಿದೆ.

ತರಗತಿಗಳು ಆರಂಭವಾಗಿ ೧ ತಿಂಗಳು ಕಳೆದಿದೆ. ಆದರೆ ಹೊಸ ಬ್ಯಾಚಿನ ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಕೊಡಗು ವಿವಿಯಿಂದ ಅತಿಥಿ ಉಪನ್ಯಾಸಕರ ನೇಮಕ ಆಗಿಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆ ಆಗಿದೆ. ಅತಿಥಿ ಉಪನ್ಯಾಸಕರಿಗೂ ಹೆಚ್ಚಿನ ಕೆಲಸ ಹೊರೆ ಬೀಳುತ್ತಿದೆ. ವೇತನವೂ ಸರಿಯಾಗಿ ಸಿಗುತ್ತಿಲ್ಲ. ಹೊಸ ವಿವಿ ಕೆಳಗೆ ಕೆಲಸ ಮಾಡಲೂ ನಮಗೂ ಖುಷಿ ಇದೆ. ಆದರೆ ನಮ್ಮ ಸಮಸ್ಯೆಗಳನ್ನು ಸರ್ಕಾರ ಮೊದಲು ಬಗೆಹರಿಸಲಿ.
ಹೆಸರು ಹೇಳಲು ಇಚ್ಛಿಸದ ಅತಿಥಿ ಉಪನ್ಯಾಸಕ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮಡಿಕೇರಿ

ಕೊಡಗು ವಿವಿಯಿಂದ ಇನ್ನು ಕೂಡ ಅತಿಥಿ ಉಪನ್ಯಾಸಕರ ನೇಮಕ ಆಗಿಲ್ಲ. ಅತಿಥಿ ಉಪನ್ಯಾಸಕರ ಸಂಬಳಕ್ಕೂ ಕೊಡಗು ವಿವಿಗೂ ಸಂಬಂಧ ಇಲ್ಲ. ಯಾಕೆಂದರೆ ಅವರು ಮಂಗಳೂರು ವಿವಿಯಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ವೇತನ ಅವರೇ ಕೊಡಬೇಕು. ಆ ಕಾಲೇಜಿನಲ್ಲಿ ಇರುವ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಕೊಡಗು ವಿವಿಗೆ ಶುಲ್ಕ ಕಟ್ಟಿ ಪ್ರವೇಶ ಪಡೆದಿದ್ದಾರೆ. ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡ ನಂತರ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಲಾಗುತ್ತದೆ. ದ್ವಿತೀಯ, ಅಂತಿಮ ವರ್ಷದ ಪದವಿ ಹಾಗೂ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಜವಾಬ್ದಾರಿ ಮಂಗಳೂರು ವಿವಿಗೆ ಸೇರಿದೆ. ಇವರಿಗೆ ಪಾಠ-ಪ್ರವಚನದಲ್ಲಿ ತೊಂದರೆ ಆಗದಂತೆ ಅಲ್ಲಿರುವ ಕಾಯಂ ಉಪನ್ಯಾಸಕರು ನೋಡಿಕೊಳ್ಳುತ್ತಾರೆ.
- ಡಾ. ಸೀನಪ್ಪ, ಕುಲಸಚಿವ (ಪ್ರಭಾರ), ಕೊಡಗು ವಿಶ್ವವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net