ಉ.ಕ. ಜಿಲ್ಲೆಯಲ್ಲಿ ತಾಲೂಕಿಗೊಬ್ಬ ಪಶು ವೈದ್ಯರೂ ಇಲ್ಲ

27-PASHU HOSPITAL
Published on

ಕಾರವಾರ: ಗೋವನ್ನು ಮಾತೆ ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಹಸುಗಳು ರೈತರ ಜೀವನಾಡಿ ಎನ್ನುವ ದೇಶ ನಮ್ಮದು. ಆದರೆ, ಅವುಗಳು ಅಸ್ವಸ್ಥಗೊಂಡರೆ ಸೂಕ್ತ ಚಿಕಿತ್ಸೆ ಕೊಡಿಸಲಾಗದ ದುಸ್ಥಿತಿ ಜಿಲ್ಲೆಯಲ್ಲಿದೆ. ಜಿಲ್ಲೆಯಲ್ಲಿ ಖಾಸಗಿಯಾಗಿ ಪಶು ವೈದ್ಯಕೀಯ ಸೇವೆ ಮಾಡುವ ವೈದ್ಯರ ಸಂಖ್ಯೆ ತೀರ ಕಡಿಮೆ ಇದೆ. ಪಶು ವೈದ್ಯಕೀಯ ಇಲಾಖೆಯಲ್ಲಿ ತಾಲೂಕಿಗೊಬ್ಬ ವೈದ್ಯರೂ ಇಲ್ಲ. ಇರಬೇಕಾಗಿದ್ದ 129 ವೈದ್ಯರ ಪೈಕಿ, 17 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಸಂಚಾರಿ ಪಶು ಚಿಕಿತ್ಸಾಲಯಗಳು ನಿಂತಿವೆ. ಪಶು ಆಂಬುಲೆನ್ಸ್‌ಗಳು ಶುರುವಾಗಿಲ್ಲ. ಇದರಿಂದ ಜಿಲ್ಲೆಯಲ್ಲಿರುವ 5 ಲಕ್ಷಕ್ಕೂ ಅಧಿಕ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಸಾವನ್ನಪ್ಪುತ್ತಿವೆ. ಕೃಷಿಕರು ದೊಡ್ಡ ಸಂಖ್ಯೆಯಲ್ಲಿ ಹೈನುಗಾರಿಕೆಯಿಂದ ದೂರವಾಗುತ್ತಿದ್ದಾರೆ. ಜಿಲ್ಲೆಯ ಹಾಲು ಉತ್ಪಾದನೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಪಶು ವೈದ್ಯರ ನೇಮಕಕ್ಕೆ ಸಂಬಂಧಿಸಿದ ಜಿಲ್ಲೆಯ ವಿವಿಧ ತಾಲೂಕುಗಳ ಹೈನುಗಾರರ ಹಕ್ಕೊತ್ತಾಯ ಇಲ್ಲಿದೆ.

ಪಶುಸಂಗೋಪನಾ ಇಲಾಖೆಯಲ್ಲಿ ವೈದ್ಯರ, ಸಿಬ್ಬಂದಿ ಕೊರತೆಯಿಂದ ಹೈನುಗಾರಿಕೆಗೆ ಹೆಚ್ಚು ತೊಂದರೆ ಆಗುತ್ತಿದೆ. ಸಮಯಕ್ಕೆ ಸರಿಯಾಗಿ ಜಾನುವಾರುಗಳಿಗೆ ಚಿಕಿತ್ಸೆ ದೊರೆಯದೇ ಹೈನುಗಾರರು ಸಂಕಟಪಡುವಂತಾಗಿದೆ. ಪ್ರತಿಯೊಂದು ಪಶು ಆಸ್ಪತ್ರೆಗೆ ಕಾಯಂ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಪಶು ವೈದ್ಯರನ್ನು ಬೇರೆ ಯಾವುದೇ ಕೆಲಸ ಕಾರ್ಯಗಳಿಗೆ ನಿಯೋಜಿಸಬಾರದು.ವೆಂಕಟಗಿರಿ ಹೆಗಡೆ ಮಳ್ಳಿಕೈ,ಸಿದ್ದಾಪುರ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಇಳಿಕೆಯಾಗಲು ಪಶು ವೈದ್ಯರ ಕೊರತೆಯೂ ಒಂದು ಕಾರಣ. ಕೆಎಂಎ್ ಮೂರು ಪಶು ವೈದ್ಯರನ್ನು ಮೂರು ತಾಲೂಕುಗಳಿಗೆ ನೇಮಿಸಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುತ್ತಿದೆ. ಆದರೂ ಪಶು ವೈದ್ಯರ ಕೊರತೆಯಿಂದ ತೀವ್ರ ಸಮಸ್ಯೆಯಾಗುತ್ತಿದೆ. ಜಿಲ್ಲೆಗೆ ಪಶು ವೈದ್ಯರ ನೇಮಕಕ್ಕೆ ವ್ಯವಸ್ಥೆ ಮಾಡಬೇಕು.ಸುರೇಶ್ಚಂದ್ರ ಹೆಗಡೆಧಾರವಾಡ ಹಾಲು ಒಕ್ಕೂಟದ ನಿರ್ದೇಶಕನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ , ಶಿರಸಿ ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆಯಿಂದ ತೀವ್ರ ಸಮಸ್ಯೆಯಾಗುತ್ತಿದೆ. ಇದ್ದ ಒಂದಿಬ್ಬರು ವೈದ್ಯರು ಎಲ್ಲ ಹೈನುಗಾರರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಜಾನುವಾರುಗಳು ಚಿಕಿತ್ಸೆ ಸಿಗದೇ ಸಾಯುತ್ತಿವೆ. ಉತ್ತರ ಕನ್ನಡಕ್ಕೆ ನೇಮಕವಾಗುವ ಬೇರೆ ಜಿಲ್ಲೆಗಳ ಪಶು ವೈದ್ಯರು ಕೆಲ ವರ್ಷದಲ್ಲಿ ಸ್ವಂತ ಜಿಲ್ಲೆಗೆ ವರ್ಗ ಮಾಡಿಸಿಕೊಂಡು ಹೋಗುತ್ತಾರೆ. ಇದರಿಂದ ಉದ್ಯೋಗ ನೀಡುವಾಗ ಕನಿಷ್ಠ 10 ವರ್ಷ ಜಿಲ್ಲೆಯಲ್ಲೇ ಕೆಲಸ ಮಾಡುವ ನಿಬಂಧನೆ ಹಾಕಬೇಕು. ಇಲ್ಲವೇ ಆಯ್ಕೆ ವೇಳೆ ಜಿಲ್ಲೆಯವರಿಗೆ ಆದ್ಯತೆ ನೀಡಬೇಕು. ಖಾಸಗಿಯವರಿಗೆ ತರಬೇತಿ ನೀಡುವ ವ್ಯವಸ್ಥೆಯನ್ನಾದರೂ ಮಾಡಬೇಕು.ವಿನಾಯಕ ರಾಯ್ಕರ್ ಮುಂಡಗೋಡ ರೈತ ಪಶು ವೈದ್ಯರು, ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕದೇ ಸಮಸ್ಯೆಯಾಗುತ್ತಿದೆ. ಯಲ್ಲಾಪುರ ತಾಲೂಕಿನಲ್ಲಿ ಇರುವ ವೈದ್ಯರು, ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ವಿಶಾಲವಾದ ತಾಲೂಕನ್ನು ನಿರ್ವಹಿಸುವುದು ಕಷ್ಟ. ಕೊರತೆ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿ, ಅನುಕೂಲ ಕಲ್ಪಿಸುವಂತೆ ಪಶುಸಂಗೋಪನಾ ಇಲಾಖೆಯ ಸಚಿವರಿಗೆ ಪತ್ರ ಬರೆದಿದ್ದೇವೆ. ಸದ್ಯದಲ್ಲೇ ನೇಮಕಾತಿಗೆ ಕ್ರಮ ಆಗಬೇಕು. ಇಲ್ಲದಿದ್ದರೆ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು, ರೈತರ ನಿಯೋಗದೊಂದಿಗೆ ಸಚಿವರನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸುತ್ತೇವೆ.ಪ್ರಶಾಂತ ಸಭಾಹಿತ ಆನಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಯಲ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net