

ಕಾರವಾರ : ತಾಯಿಯನ್ನು ಕಳೆದುಕೊಂಡಿದ್ದರೂ ಆಕೆಯ ಅಂತ್ಯಸಂಸ್ಕಾರಕ್ಕೆ ತೆರಳಲಾಗದ ಪರಿಸ್ಥಿತಿ ಯುವಕನೊಬ್ಬನಿಗೆ ಬಂದಿತ್ತು. ಅಸ್ಸಾಂ ಮೂಲದ ಬಾಬುಲು ಮಾಜಿ ಎಂಬ ಕಾರ್ಮಿಕ ಲಾಕ್‌ಡೌನ್‌ನಿಂದ ಇಂಥ ಸಂಕಷ್ಟಕ್ಕೆ ಒಳಗಾಗಿದ್ದ. ಬಾಬುಲು ಸೇರಿ 15 ಕಾರ್ಮಿಕರು ಮಾ.24ರಂದು ಬೆಂಗಳೂರಿನಿಂದ ಗೋವಾದ ಪಣಜಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಲಾಕ್‌ಡೌನ್ ಸುದ್ದಿ ಕೇಳಿ ಅಲ್ಲಿಂದ ಹೊರಟಿದ್ದಾರೆ. ಆದರೆ, ಮುಂದೆ ತೆರಳಲಾಗದೆ ಕಾರವಾರದಲ್ಲೇ ಸಿಲುಕಿಕೊಂಡರು. ಸದ್ಯ ಕಾರವಾರ ನಗರಸಭೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಎಲ್ಲ ಕಾರ್ಮಿಕರಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ.
ಬಾಬುಲು ತಾಯಿ ಬುಧವಾರ ಸಾವಿಗೀಡಾಗಿದ್ದು, ಸಂಬಂಧಿಕರು ಫೋನ್ ಮಾಡಿ ತಿಳಿಸಿದ್ದಾರೆ. ರೈಲು ಅಥವಾ ಯಾವುದೇ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಇಲ್ಲದ್ದರಿಂದ ಬಾಬುಲು ಏನೂ ಮಾಡದ ಸ್ಥಿತಿಯಲ್ಲಿದ್ದಾರೆ. ‘ಇಲ್ಲಿಗೆ ಬರುವಾಗ ಅಮ್ಮನೇ ನನಗೆ 500 ರೂ. ಕೊಟ್ಟು ಕಳಿಸಿದ್ದಳು. ಆದರೆ, ಈಗ ಆಕೆಯೇ ಇಲ್ಲ. ನನ್ನ ತಂದೆ, ಅಣ್ಣ ಆಕೆಯ ಅಂತಿಮವಿಧಿ ಮುಗಿಸಿದ್ದಾರೆ. ನನ್ನನ್ನು ಹೇಗಾದರೂ ಊರಿಗೆ ಕಳಿಸಿ’ ಎಂದು ಬಾಬುಲು ಕಣ್ಣೀರು ಹಾಕುತ್ತಾರೆ.
ಆದರೆ, ಲಾಕ್‌ಡೌನ್ ಸಮಯದಲ್ಲಿ ರೈಲು ವ್ಯವಸ್ಥೆ ಇಲ್ಲದೆ 3 ಸಾವಿರ ಕಿ.ಮೀ. ಸಂಚರಿಸುವುದು ದುಸ್ತರವಾಗಿದ್ದು, ಜಿಲ್ಲಾಡಳಿತವೂ ಅಸಹಾಯಕವಾಗಿದೆ.