

ಕಾರವಾರ: ನಗರದ ಕಾರವಾರ ಅರ್ಬನ್ ಬ್ಯಾಂಕ್ ಅವ್ಯವಹಾರವನ್ನು ಸಿಐಡಿಗೆ ವಹಿಸಬೇಕು ಎಂದು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತಾ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ನಲ್ಲಿ 54 ಕೋಟಿ ಅವ್ಯವಹಾರವಾದ ಬಗ್ಗೆ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇದುವರೆಗೂ ಎಫ್‌ಐಆರ್ ದಾಖಲಾಗಿಲ್ಲ. ಬ್ಯಾಂಕ್ ಚಾಲ್ತಿ ಖಾತೆಯಲ್ಲಿದ್ದ ನನ್ನ 4 ಲಕ್ಷ ರೂ. ಹಣವನ್ನು ಅಽಕಾರಿಗಳು ವಾಪಸ್ ನೀಡದ ಬಗ್ಗೆ ನಾನು ವೈಯಕ್ತಿಕವಾಗಿ ಆಡಳಿತ ಮಂಡಳಿ ಹಾಗೂ ಹಾಲಿ ಜಿಎಂ ವಿರುದ್ಧ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್ ಐಆರ್ ದಾಖಲಾಗಿದೆ. ಆದರೆ, ಪೊಲೀಸರು ಇದುವರೆಗೂ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ವಹಿಸಿಲ್ಲ. ಸ್ಥಳೀಯ ಪೊಲೀಸರಿಂದ ತನಿಖೆಯ ವಿಶ್ವಾಸ ಬರುತ್ತಿಲ್ಲ. ಇದರಿಂದ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಒತ್ತಾಯಿಸಿದರು.
2021-22 ರವರೆಗೆ ಬ್ಯಾಂಕ್ ನಲ್ಲಿ ಆಡಿಟ್ ಆಗಿದೆ. ಆಗ ಬ್ಯಾಂಕ್‌ಗೆ 21 ಲಕ್ಷ ರೂ. ಲಾಭವಾಗಿದೆ ಎಂದು ತೋರಿಸಲಾಗಿದೆ. ಅದನ್ನು ರಾಜ್ಯ ಸಹಕಾರ ಮಹಾ ಮಂಡಳವೂ ಒಂದು ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಹಾಲಿ ಆಡಳಿತ ಮಂಡಳಿ ಹಾಗೂ ಮ್ಯಾನೇಜರ್ ಅವರು ಕಳೆದ 10 ವರ್ಷಗಳಲ್ಲಿ ಅವ್ಯವಹಾರವಾಗಿದೆ ಎಂದು ಹೇಳುತ್ತಿದ್ದು, ಈಗಾಗಲೇ ಮೃತಪಟ್ಟಿರುವ ಬ್ಯಾಂಕ್‌ನ ಆಗಿನ ಜಿಪಂ ಗುರು ಬಾಂದೇಕರ್ ಮೇಲೆ ಎಲ್ಲ ಆರೋಪ ಹೊರಿಸಿ ತಾವು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದರು.
ಆಗಿನ ಜಿಎಂ ಗುರು ಬಾಂದೇಕರ್ ಮೃತಪಟ್ಟ ಒಂದೇ ತಿಂಗಳಲ್ಲಿ 2023 ಆಗಸ್ಟ್ನಲ್ಲಿ ಬ್ಯಾಂಕ್ ನ ಆಡಳಿತ ಮಂಡಳಿ ಸಾಮಾನ್ಯ ಸಭೆ ನಡೆದಿತ್ತು. ಆಗಲೂ ಯಾವುದೇ ಅವ್ಯವಹಾರ ದ ಬಗ್ಗೆ ಪ್ರಸ್ತಾಪವಾಗಿಲ್ಲ. ಹಾಗಾಗಿ ಸದ್ಯ ಇರುವ ಆಡಳಿತ ಮಂಡಳಿ ಹಾಗೂ ಜಿಎಂ ವಾಸುದೇವ ಪಂಗA ಮೇಲೂ ಗುಮಾನಿ ಇದ್ದು, ಮೊದಲು ಅವರೆಲ್ಲರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ, ಬಡ ಜನರ ಹಣವನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್ ಇದುವರೆಗೂ ಐಎಫ್‌ಎಸ್‌ಸಿ ಕೋಡ್ ಹೊಂದಿಲ್ಲ. ಆನ್‌ಲೈನ್ ವ್ಯವಹಾರವೇ ನಡೆಸಿಲ್ಲ. ಆದರೆ, ಆಡಿಟ್ ನಡೆಸಿದ ಚೇತನ್ ಪಡ್ಕೆ ಎಂಬುವವರು ಅನ್‌ಲೈನ್ ವ್ಯವಹಾರ ನಡೆಯುತ್ತಿದೆ ಎಂದು ಸಹಿ ಹಾಕಿದ್ದಾರೆ. ಕೆಲ ವರ್ಷಗಳ ಹಿಂದೆ ನಿಯಮ ಮೀರಿ 48 ವರ್ಷದ ಮಹಿಳೆಯೊಬ್ಬರನ್ನು ಮ್ಯಾನೇಜರ್ ಆಗಿ ನೇಮಕ ಮಾಡಿಕೊಳ್ಳಲಾಯಿತು. ಆದರೆ, ಸಹಕಾರ ಇಲಾಖೆ ಆ ಬಗ್ಗೆ ಪ್ರಶ್ನೆ ಮಾಡಿಲ್ಲ. ಇದರಿಂದ ಆಡಿಟರ್‌ಗಳು, ಸಹಕಾರ ಇಲಾಖೆ ಅಽಕಾರಿಗಳೂ ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಶಂಕೆ ಇದ್ದು, ಅವರ ವಿರುದ್ಧವೂ ತನಿಖೆ ನಡೆಸಬೇಕು ಎಂದರು. ಅರವಿಂದ ಗುನಗಿ, ಸುನೀಲ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.