

ಕಾರವಾರ(Karwar): ಬಹುತ್ವವನ್ನು ಒಳಗೊಳ್ಳುವುದು, ಬಹು ಭಾಷೆಯಲ್ಲಿ ಬಹು ಸಂಸ್ಕೃತಿಯನ್ನು ಅಭಿವ್ಯಕ್ತಿಸುವುದು ಕಾರವಾರದ ವಿಶೇಷ. ಅದನ್ನು ಸಂಭ್ರಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿತ್ತೂರು ರಾಣಿ ಚೆನ್ನಮ್ಮ ವಿವಿ ವಿಶೇಷ ಅಧಿಕಾರಿ, ಡಾ.ಎಂ.ಜಿ.ಹೆಗಡೆ ಹೇಳಿದರು. ನಗರದ ದೈವಜ್ಞ ಭವನದ ದಿ.ವಿಷ್ಣು ನಾಯ್ಕ ವೇದಿಕೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರವಾರ ತಾಲೂಕು 8 ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. `ನನ್ನ ಇಡೀ ಸಾಹಿತ್ಯದ ವಸ್ತು ಕಾರವಾರದಲ್ಲಿ ಇಲ್ಲಿನ ಸಮುದ್ರದಲ್ಲಿ ಸಿಕ್ಕಿತು' ಎಂದು ರವೀಂದ್ರನಾಥ ಟ್ಯಾಗೋರ್ ಹೇಳಿದ್ದಾರೆ. ಸರಸ್ವತಿ ಸಮ್ಮಾನ ಪುರಸ್ಕೃತ ಮಹಾಬಲೇಶ್ವರ ಸೈಲ್ ಅವರು ಕಾರವಾರದ ಸುತ್ತಮುತ್ತಲಿನ ವಿಷಯ ವಸ್ತುವನ್ನಿಟ್ಟುಕೊಂಡು ಮರಾಠಿ, ಕೊಂಕಣಿಯಲ್ಲಿ ಸಾಹಿತ್ಯ ರಚಿಸುತ್ತಾರೆ. ಕರ್ನಾಟಕ ಏಕೀಕರಣಕ್ಕೂಮುಂಚೆ ಕಾರವಾರದಲ್ಲಿ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವೂ ನಡೆದಿತ್ತು ಎಂದು ಕಾರವಾರ Karwar ದ ಬಹುತ್ವವನ್ನು ವಿವರಿಸಿದರು. ಹಿರಿಯ ಸಾಹಿತಿ ಡಾ.ಜಮಿರುಲ್ಲಾ ಷರೀಫ್,ಮಾತನಾಡಿ,ಕನ್ನಡ ಅಪಾಯದ ಸ್ಥಿತಿಯಲ್ಲಿದೆ. ಸಾಹಿತಿಗಳ ಮನಸ್ಸನ್ನು ಕುಬ್ಜಗೊಳಿಸುವ ಸ್ಥಿತಿ ಬಂದಿದೆ. ಇಂದಿನ ಜನರಿಗೆ ಪುಸ್ತಕ ಬೇಡವಾಗಿದೆ. ಸರ್ವ ಜ್ಞಾನದ ಮೊಬೈಲ್ ಗೆ ವಾಟ್ಸ್ಆ್ಯಪ್ ಸಾಹಿತ್ಯಕ್ಕೆ ಎಲ್ಲವೂ ವರ್ಗಾವಣೆಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ, ರಸ್ತೆ, ಗಟಾರ ನಿರ್ಮಾಣ ಅಭಿವೃದ್ಧಿಯಲ್ಲ. ಸಾಂಸ್ಕೃತಿಕವಾಗಿ ಶೈಕ್ಷಣಿಲವಾಗಿ ಅಭಿವೃದ್ಧಿಯಾದರೆ ಮಾತ್ರ ನಾಡಿನ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ನಮ್ಮನ್ನು ಆಳುವವರು ಅರ್ಥ ಮಾಡಿಕೊಳ್ಳಬೇಕು. ಇತ್ತೀಚೆಗೆ ಕನ್ನಡ ಕಟ್ಟುವ ಕೆಲಸಗಳಿಗೆ ಅನುದಾನ ಬರುತ್ತಿಲ್ಲ. ಆದರೆ, ನಾವು ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದನ್ನು ಬಿಟ್ಟಿಲ್ಲ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ಕಸಾಪ ಜಿಲ್ಲಾ ಕರ್ಯದರ್ಶಿಗಳಾದ ಜಾರ್ಜ್ ಫರ್ನಾಂಡಿಸ್, ಪಿ.ಆರ್.ನಾಯ್ಕ, ಅಂಕೋಲಾ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಕಸಾಪ ಪದಾಽಕಾರಿ ಮಾಧವ ನಾಯ್ಕ, ಗಣಪತಿ ಮಾಂಗ್ರೆ, ಕಾರವಾರ ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪಿ.ಗೌಡ, ಕಸಾಪ ತಾಲೂಕು ಕೋಶಾಧ್ಯಕ್ಷ ಶಿವಾನಂದ ತಾಂಡೇಲ ವೇದಿಕೆಯಲ್ಲಿದ್ದರು. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ದ್ವಾರಗಳನ್ನು ಉದ್ಘಾಟಿಸಿದರು. ತಹಸೀಲ್ದಾರ್ ನಿಶ್ಚಲ ನರೋನಾ ದ್ವಾರಗಳನ್ನು ಉದ್ಘಾಟಿಸಿದರು. ಕಾರವಾರ ತಾಲೂಕು 7 ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಎಂ.ಎ.ಖತೀಬ್ ನೂತನ ಅಧ್ಯಕ್ಷರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿದರು. ಕಸಾಪ ಕಾರವಾರ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಗಣೇಶಬಿಷ್ಠಣ್ಣನವರ್ ಕಾರ್ಯಕ್ರಮ ನಿರೂಪಿಸಿದರು.ಜಿ.ಡಿ.ಮನೋಜೆ ಸ್ವಾಗತಿಸಿದರು.ಯಮುನಾ ಗಾಂವಕರ್ ಎಂ.ಜಿ.ಹೆಗಡೆ ಅವರನ್ನು, ವನಿತಾ ಶೇಟ್ ಜಮಿರುಲ್ಲಾ ಷರೀಫ್ ಅವರನ್ನು, ಎನ್.ಜಿ.ನಾಯಕ ಪ್ರೇಮಾ ಟಿಎಂಆರ್ ಅವರನ್ನು ಪರಿಚಯಿಸಿದರು.ಬಾಬು ಶೇಖ್ ವಂದಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷೆ ಸಾಹಿತಿ ಪ್ರೇಮಾ ಟಿ.ಎಂ.ಆರ್, ಜನ ಹಣದ ಹಿಂದೆ ಬಿದ್ದ ಕಾರಣ ನಾಡು, ನುಡಿ ಹಸಿವು, ಹಾಡು ಎಲ್ಲವೂ ಗೌಣವಾಗಿದೆ. ಸರ್ಕಾರ ಕನ್ನಡದಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬ ನಿಯಮವನ್ನು ಕಡ್ಡಾಯ ಮಾಡಬೇಕು. ಎಲ್ಲರೂ ಕನ್ನಡ ಶಾಲೆಗಳಿಗೆ ಹೋಗುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು. ಕಾರವಾರದ ಪ್ರಕೃತಿ, ಇಲ್ಲಿನ ಊಟ, ಸಾಂಸ್ಕೃತಿಕ ವಿಶೇಷತೆ, ಸಮಸ್ಯೆಗಳ ಬಗ್ಗೆ ಪ್ರೇಮಾ ತಮ್ಮ ಭಾಷಣದಲ್ಲಿ ಬೆಳಕು ಚೆಲ್ಲಿದರು.
ವಕೀಲ ನಾಗರಾಜ ನಾಯಕ ಅಧ್ಯಕ್ಷತೆಯಲ್ಲಿ ಸೌಹಾರ್ದ ಕಾರವಾರ ವಿಚಾರಗೋಷ್ಠಿ ನಡೆಯಿತು. ಟಿ.ಬಿ.ಹರಿಕಾಂತ ಆಶಯ ನುಡಿಗಳನ್ನು ಆಡಳಿದರು. ಮಧ್ಯಾಹ್ನ ವಸಂತ ಬಾಂದೇಕರ್ ಅವರ ಅಧ್ಯಕ್ಷತೆಯಲ್ಲಿ ಬಹು ಭಾಷಾ ಕವಿಗೋಷ್ಠಿ ನಡೆಯಿತು. ಸಾಯಂಕಾಲ ಎಸ್‌ಪಿ ಎಂ.ನಾರಾಯಣ ಸಮಾರೋಪ ಭಾಷಣ ಮಾಡಿದರು. ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು.