

ಕಾರವಾರ:ವಿದ್ಯುತ್ ದರ ಏರಿಕೆ ಖಂಡಿಸಿ ಕಾರವಾರ ಛೇಂಬರ್ ಆಫ್ ಕಾಮರ್ಸ್ ಸದಸ್ಯರು ಕರೆ ನೀಡಿದ್ದ ಕಾರವಾರ ಬಂದ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ನಗರದಲ್ಲಿ ಗುರುವಾರ ಬೆಳಗಿನಿಂದ ಹೋಟೆಲ್, ಅಂಗಡಿಗಳು ಬಂದಾಗಿದ್ದವು. ಆಟೋ ರಿಕ್ಷಾ, ಟೆಂಪೋ ಓಡಾಟ ಕೂಡ ಸ್ಥಗಿತವಾಗಿತ್ತು.
ಬಸ್ ಸಂಚಾರ ಎಂದಿನಂತೆ ಇತ್ತು. ಗ್ರಾಮೀಣ ಭಾಗದಿಂದ ಬಂದ ಜನ ಅಂಗಡಿಗಳಿಲ್ಲದೇ ತೊಂದರೆಪಟ್ಟರು. ಊಟ, ತಿಂಡಿಗೆ ಹೋಟೆಲ್ ನೆಚ್ಚಿಕೊಂಡವರು ಸಮಸ್ಯೆ ಅನುಭವಿಸಿದರು.
ನಗರದ ಸವಿತಾ ಸರ್ಕಲ್ ನಿಂದ ವ್ಯಾಪಾರಸ್ಥರು ಕಾರವಾರ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿತೆಂದ್ರ ಥನ್ನಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಸಾವಿರಾರು ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಇಲ್ಲಿಂದ ಗೋವಾಕ್ಕೆ
ಪ್ರತಿ ಯೂನಿಟ್ ಗೆ 3ರೂ.ಗೂ ಕಡಿಮೆ ಬೆಲೆಯಲ್ಲಿ ವಿದ್ಯುತ್ ನೀಡಲಾಗುತ್ತದೆ. ಆದರೆ, ನಾವು ಪ್ರತಿ ಯೂನಿಟ್ ಗೆ 7 ರೂ. ತೆರಬೇಕಾಗಿದೆ.
ವಿದ್ಯುತ್ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಡಾ.ನಿತಿನ್ ಪಿಕಳೆ, ಶ್ಯಾಮಸುಂದರ ಬಸ್ರೂರ್, ಅಜಯ ಸಾಹುಕಾರ್, ಅನಮೋಲ್ ರೇವಣಕರ್ ಇತರರು ಇದ್ದರು.