

ಕಾರವಾರ: ಈಗಾಗಲೇ ಹೊನ್ನಾವರ ಹಾಗೂ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿವಾದ ನಡೆದಿದೆ. ಈಗ ಕಾರವಾರ ಇಲ್ಲಿನ ವಾಣಿಜ್ಯ ಬಂದರಿನ ಒಂದು ಭಾಗವನ್ನು ಆರ್‌ಒಎಂಟಿ ಮಾದರಿಯಲ್ಲಿ ಖಾಸಗಿಗೆ ವಹಿಸಲು ಮೆರಿಟೈಮ್ ಬೋರ್ಡ್ ಮುಂದಾಗಿದೆ. ಬೋರ್ಡ್ನ ಪ್ರಸ್ತಾವನೆಗೆ ಮೆರಿಟೈಮ್ ಬೋರ್ಡ್ ಅನುಮೋದನೆ ಸಿಕ್ಕಿದ್ದು, ರಾಜ್ಯ ಸಚಿವ ಸಂಪುಟದಿಂದ ಅನುಮೋದನೆಯಾಗಬೇಕಿದೆ.
ಕಾರವಾರದ ವಾಣಿಜ್ಯ ಬಂದರಿನಲ್ಲಿ 375 ಮೀಟರ್ ಜಟ್ಟಿ(ಬರ್ತ್) ಇದೆ. ಅದನ್ನು ನೇರವಾಗಿ ಮೆರಿಟೈಮ್ ಬೋರ್ಡ್ (ಮೊದಲು ಬಂದರು ಇಲಾಖೆ) ನಿರ್ವಹಿಸುತ್ತಿದೆ. ಆದರೆ, ಬಂದರಿನ ಸಾಮರ್ಥ್ಯದ ಸಂಪೂರ್ಣ ಬಳಕೆಯಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಬಂದರಿನ ಆದಾಯ ಇಳಿಕೆಯಾಗುತ್ತಿದೆ. ರಫ್ತು ಪ್ರಕ್ರಿಯೆ ಭಾಗಶಃ ಸ್ಥಗಿತವಾಗಿದೆ. 2022-23 ರಲ್ಲಿ 21 ಕೋಟಿ ರೂ. ಇದ್ದ ಕಾರವಾರ ವಾಣಿಜ್ಯ ಬಂದರಿನ ನೇರ ಆದಾಯ 2023-24 ಕ್ಕೆ 18 ಕೋಟಿಗೆ ಇಳಿಕೆಯಾಗಿತ್ತು. 2024-25 ರಲ್ಲಿ ಅದು 14.29 ಕೋಟಿಗೆ ಇಳಿಕೆಯಾಗಿದೆ. ಬಂದರಿನಲ್ಲಿ ಮತ್ತೆ, ಮತ್ತೆ ತುಂಬುವ ಹೂಳು, ವಾರ್ಫ್ಗಳ ರಿಪೇರಿ ಮುಂತಾದ ಸಾಕಷ್ಟು ಖರ್ಚುಗಳಿವೆ. ಬಂದರಿನ ನವೀಕರಣ , ವಿಸ್ತಣೆ ಮಾಡಬೇಕು ಎಂದರೆ ಸರ್ಕಾರ ಅನುದಾನ ನೀಡಬೇಕಾದ ಪರಿಸ್ಥಿತಿ ಇದೆ. ಈಗಾಗಲೇ ಬಂದರಿನ ವ್ಯಾಪ್ತಿಯ ಸಾಕಷ್ಟು ಜಾಗಗಳನ್ನು ಖಾಸಗಿಗೆ ಹಂಚಿಕೆ ಮಾಡಲಾಗಿದೆ. ಮುಂದೆ ವಾರ್ಫ್ನ ಒಂದು ಭಾಗವನ್ನು ಖಾಸಗಿಗೆ ವಹಿಸಲು ಮೆರಿಟೈಮ್ ಬೋರ್ಡ್ ಚಿಂತಿಸಿದೆ.
ಒಟ್ಟು 175 ಮೀಟರ್ ಬರ್ತ್ನ್ನು ಖಾಸಗಿಗೆ ಲೀಸ್‌ಗೆ ನೀಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಟೆಂಡರ್ ಪಡೆದ ಖಾಸಗಿ ಕಂಪನಿ ಇಡೀ ಬಂದರಿನ ವ್ಯಾಪ್ತಿಯನ್ನು ರಿಪೇರಿ ಮಾಡಬೇಕಿದೆ. ತನಗೆ ನೀಡಿದ 175 ಮೀಟರ್ ಬರ್ತ್ನಲ್ಲಿ ಅದು ನಿಯಮಾವಳಿಯಂತೆ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ. ಮತ್ತು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕಿದೆ. ಲೀಸ್ ಅವಽ ಮುಗಿದ ನಂತರ ಜಟ್ಟಿಯನ್ನು ಮತ್ತೆ ಬೋರ್ಡ್ಗೆ ವರ್ಗಾವಣೆ ಮಾಡಬೇಕಿದೆ. ಅದಕ್ಕೆ ಆರ್‌ಒಎಂಟಿ ಎಂಬ ಮಾದರಿ ಎಂದು ಕರೆಯಲಾಗುತ್ತದೆ. ಇದರ ಜತೆಗೆ ಲೀಸ್ ಪಡೆದುಕೊಂಡ ಖಾಸಗಿ ಕಂಪನಿ ಬೋರ್ಡ್ಗೆ ವಾರ್ಷಿಕವಾಗಿ ಬಾಡಿಗೆ ಭರಿಸಬೇಕಿದೆ.
ಮಂಗಳೂರು ಮಲ್ಪೆ ಕೂಡ ಖಾಸಗಿಗೆ
ಮೆರಿಟೈಮ್ ಬೋರ್ಡ್ ಸುಪರ್ದಿಯಲ್ಲಿರುವ ಹಳೆಯ ಮಂಗಳೂರು ಬಂದರಿನ ಎರಡು ವಾರ್ಫ್ಗಳು ಹಾಗೂ ಮಲ್ಪೆಯ ಒಂದು ವಾರ್ಫ್ನ್ನೂ ಖಾಸಗಿಗೆ ವಹಿಸಲು ಪ್ರಸ್ತಾವನೆ ಸಿದ್ಧ ಮಾಡಲಾಗಿದೆ. ಎಲ್ಲವಕ್ಕೂ ಒಟ್ಟಗೇ ಅನುಮೋದನೆ ಪಡೆಯಲಾಗುತ್ತದೆ ಎಂದು ಮೆರಿಟೈಮ್ ಬೋರ್ಡ್ ಅಽಕಾರಿಗಳು ತಿಳಿಸಿದ್ದಾರೆ.
ಇಇ ಮೆರಿಟೈಮ್ ಬೋರ್ಡ್ಎಂ.ವಿ.ಪ್ರಸಾದ್ ಕಾರವಾರ ಬಂದರಿನ 175 ಮೀಟರ್ ವಾರ್ಫ್ನ್ನು ಆರ್‌ಒಎಂಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಕ್ಯಾಬಿನೇಟ್ ಅನುಮೋದನೆಗೆ ಇಡಲಾಗಿದೆ. ಪಡೆದ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ.