ಟುಪೊಲೆವ್ ಆಗಮನ ಮತ್ತಷ್ಟು ಲೇಟ್

TUPOLOVO
Published on

ಸುಭಾಸ ಧೂಪದಹೊಂಡ ಕಾರವಾರ
ಭಾರತೀಯ ನೌಕಾಸೇನೆ ಕರ್ನಾಟಕಕ್ಕೆ ಮಂಜೂರು ಮಾಡಿರುವ ಟುಪೊಲೆವ್ ಯುದ್ಧ ವಿಮಾನವನ್ನು ಕಾರವಾರದಲ್ಲಿ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸುವ ಕಾರ್ಯ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಭಾರತೀಯ ನೌಕಾಸೇನೆಯಲ್ಲಿ ಸುಮಾರು 3 ದಶಕಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತವಾಗಿರುವ ವಿಮಾನವನ್ನು ಕರ್ನಾಟಕಕ್ಕೆ ಮಂಜೂರು ಮಾಡಿ 6 ವರ್ಷ ಕಳೆದಿದೆ. ಅದನ್ನು ಇಲ್ಲಿನ ಟ್ಯಾಗೋರ್ ಕಡಲ ತೀರದ ಚಪಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಪಕ್ಕದಲ್ಲಿ ಇನ್ನೊಂದು ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸುವ ಯೋಜನೆ ವರ್ಷದಿಂದ ವರ್ಷಕ್ಕೆ ಮುಂದೆ ಹೋಗುತ್ತಲೇ ಇದೆ. ಅದೇ ಅವಧಿಯಲ್ಲಿ ನೌಕಾಸೇನೆಯಿಂದ ವಿಮಾನ ಪಡೆದ ಆಂಧ್ರ ಪ್ರದೇಶ ಮ್ಯೂಸಿಯಂ ನಿರ್ಮಿಸಿ ಈಗಾಗಲೇ 6 ವರ್ಷ ಕಳೆದಿದೆ. ಇದು ಕರ್ನಾಟಕ ಸರ್ಕಾರದ ವಿಳಂಬ ನೀತಿ ಹಾಗೂ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ನಿವೃತ್ತವಾದ ವಿಮಾನವನ್ನು ತಮಿಳುನಾಡಿನ ಅರಕ್ಕೊಣಂ ನೌಕಾ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದು, ಅದರ ಬಿಡಿ ಭಾಗಗಳನ್ನು ಬಿಚ್ಚಿ, ಕಾರವಾರಕ್ಕೆ ತಂದು ಮರು ಜೋಡಣೆ ಮಾಡುವ ಜವಾಬ್ದಾರಿಯನ್ನು ಭಾರತೀಯ ನೌಕಾಸೇನೆ ವಹಿಸಿಕೊಂಡಿದೆ. ಈ ಕುರಿತು 2020 ರ ಮಾರ್ಚ್‌ನಲ್ಲಿಯೇ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಕರ್ನಾಟಕ ನೌಕಾ ವಲಯದ ನಡುವೆ ಒಪ್ಪಂದವಾಗಿದೆ. 2023 ರ ಜನವರಿ 27 ರಂದು ಈ ಕಾರ್ಯಕ್ಕಾಗಿ ಭೂಮಿ ಪೂಜೆ ನೆರವೇರಿದೆ. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಅತುಲ್ ಆನಂದ ಭಾಗವಹಿಸಿದ್ದರು. ಇನ್ನು ನಾಲ್ಕು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ವಿಮಾನ ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ರಿಯರ್ ಅಡ್ಮಿರಲ್ ಅತುಲ್ ಆನಂದ ತಿಳಿಸಿದ್ದರು. ಆದರೆ, 6 ತಿಂಗಳು ಕಳೆದ ನಂತರವೂ ಇದುವರೆಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
ಮೀನಮೇಷ: ಟುಪೊಲೆವ್(ಟಿಯು)-142 ಯುದ್ಧ ವಿಮಾನಗಳನ್ನು ಭಾರತೀಯ ನೌಕಾಸೇನೆ 1988 ರಲ್ಲಿ ರಷ್ಯಾದಿಂದ ಖರೀದಿ ಮಾಡಿತ್ತು. 29 ವರ್ಷ ಸೇವೆಯ ನಂತರ 7 ಯುದ್ಧ ವಿಮಾನಗಳನ್ನು 2017 ರ ಮಾರ್ಚ್ 27 ರಂದು ತಮಿಳುನಾಡು ಅರಕ್ಕೊಣಂನ ರಂಜಲಿ ನೌಕಾನೆಲೆಯಲ್ಲಿ ನಿವೃತ್ತಿಗೊಳಿಸಲಾಯಿತು. ಉಳಿದ ವಿಮಾನಗಳನ್ನು ಸಂಪೂರ್ಣವಾಗಿ ಒಡೆದು ಹಾಕಲಾಯಿತು. ಒಂದು ವಿಮಾನವನ್ನು ಆಂಧ್ರ ಪ್ರದೇಶಕ್ಕೆ ಹಾಗೂ ಇನ್ನೊಂದು ವಿಮಾನವನ್ನು ಕರ್ನಾಟಕಕ್ಕೆ ಭಾರತೀಯ ನೌಕಾಸೇನೆ ಮ್ಯೂಸಿಯಂ ಮಾಡಲು ನೀಡಿತು. ಆಂದ್ರ ಪ್ರದೇಶದ ವಿಶಾಖಾಪಟ್ಟಣಂನಲ್ಲಿ 2017 ರಲ್ಲೇ ಟಿಯು-142 ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ. ಅದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.
ಕಾರವಾರದಲ್ಲೂ ಟಿಯು-142 ಪ್ರತಿಷ್ಠಾಪಿಸಿದಲ್ಲಿ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಸಂಶಯವೇ ಇರಲಿಲ್ಲ. ಆದರೆ, ಸೇನೆಯು ಉಚಿತವಾಗಿ ವಿಮಾನ ನೀಡಿದರೂ ಅದನ್ನು ಪ್ರತಿಷ್ಠಾಪಿಸಲು ಕರ್ನಾಟಕ ಸರ್ಕಾರ ಹಿಂದೆಮುಂದೆ ನೋಡುತ್ತಿದೆ. ಮೇಲಾಗಿ ಸಾಗಣೆಗೆ ನೌಕಾಸೇನೆಯಿಂದಲೇ ಹಣ ಕೇಳಲಾಗುತ್ತಿರುವುದು ಅಚ್ಚರಿಯ ಸಂಗತಿ ಎಂದು ಹೆಸರು ಹೇಳಲಿಚ್ಛಿಸದ ನೌಕಾಸೇನೆಯ ಹಿರಿಯ ಅಧಿಕಾರಿಯೊಬ್ಬರು ಸರ್ಕಾರದ ಬೇಜವಾಬ್ದಾರಿಯ ಬಗ್ಗೆ ಟೀಕಿಸಿದ್ದರು.

6 ಕೋಟಿ ರೂ.ಗೂ ಅಧಿಕ ವೆಚ್ಚ
ಟಿಯು-142 ಮ್ಯೂಸಿಯಂ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ 2 ಕೋಟಿ ರೂ. ಮಂಜೂರು ಮಾಡಿದೆ. ನೆಲ, ಕಾಂಪೌಂಡ್ ಮುಂತಾದ ಮೂಲ ಸೌಕರ್ಯ ನಿರ್ಮಾಣಕ್ಕೆ ಅದನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಅದರ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಸಾಕಷ್ಟು ಮನವಿ, ಬೇಡಿಕೆಗಳ ನಂತರ ವಿಮಾನವನ್ನು ಬೇರ್ಪಡಿಸಿ ಸಾಗಿಸಿ, ಇಲ್ಲಿ ಮರು ಜೋಡಣೆ ಮಾಡುವ ಕಾರ್ಯಕ್ಕೆ ಇನ್ನೂ ಸುಮಾರು 4 ಕೋಟಿ ರೂ. ಬೇಕಾಗಬಹುದು ಎಂದು ಯೋಜಿಸಲಾಗಿದ್ದು, ಆ ಕಾರ್ಯವನ್ನು ನೌಕಾಸೇನೆ ವಹಿಸಿಕೊಂಡಿದೆ.

ಟುಪೊಲೆವ್ ಬಿಡಿ ಭಾಗಗಳನ್ನು ಬೇರ್ಪಡಿಸಿ ಸಾಗಣೆ ಮಾಡುವ ಕಾರ್ಯಕ್ಕೆ ಟೆಂಡರ್ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಎಂದು ನೌಕಾಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಟೆಂಡರ್ ಅಂತಿಮವಾದ ಬಳಿಕ ಸಾಗಣೆ ಪ್ರಾರಂಭವಾಗಲಿದೆ. ಇನ್ನು ಮ್ಯೂಸಿಯಂ ನಿರ್ವಹಣೆಯನ್ನೂ ಭಾರತೀಯ ನೌಕಾಸೇನೆಯೇ ನೋಡಿಕೊಳ್ಳಬೇಕು ಎಂದು ನಾವು ಮನವಿ ಮಾಡಿದ್ದೇವೆ. ಅದಕ್ಕೆ ಅಲ್ಲಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ.ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net