

Karwar: ತಾಲೂಕಿನ ಕಡವಾಡ ಹಳೆಕೋಟದಲ್ಲಿ 53 ವರ್ಷಳ ಹಿಂದೆ ವಿತರಿಸಿದ ಪಟ್ಟಾವನ್ನು ಕಾಲನಿ ನಿವಾಸಿಗಳ ಹೆಸರಿಗೆ ಮಾಡಿಕೊಡುವಂತೆ ಆಗ್ರಹಿಸಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. 1972-73ರಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ 155 ಪ್ಲಾಟ್‌ಗಳನ್ನು ಸ್ಥಳೀಯರಿಗೆ ನೀಡಲಾಗಿತ್ತು. ಅದರಲ್ಲಿ 81 ಜನರಿಗೆ ಪಟ್ಟಾ ವಿತರಿಸಲಾಗಿದ್ದರೆ, ಉಳಿದ 74 ಪ್ಲಾಟ್‌ಗಳಿಗೆ ಇನ್ನು ಪಟ್ಟಾ ವಿತರಿಸಿಲ್ಲ. ಒಟ್ಟು 155 ಪ್ಲಾಟ್‌ಗಳಲ್ಲಿ ಎಲ್ಲ ಸಮುದಾಯದವರು ಮನೆ, ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಸರ್ಕಾರಕ್ಕೆ ಕರ ಭರಣ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಆರ್‌ಟಿಸಿಯ ಹಕ್ಕಿನ ಕಾಲಂನಲ್ಲಿ ನಿವಾಸಿಗಳ ಹೆಸರಿಲ್ಲ.
ಈ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ. ಅರಣ್ಯ ಇಲಾಖೆಯವರಾಗಲಿ, ಅಥವಾ ಕಂದಾಯ ಇಲಾಖೆಯವರಾಗಲಿ ಇವರ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ಇವರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯದಂತಾಗಿವೆ. ಇದು ಮಾತ್ರವಲ್ಲದೇ, ಹಣಕೋಣ, ಕಿನ್ನರ, ಚಿತ್ತಾಕುಲ, ಅಮದಳ್ಳಿ ಹಗೂ ಇತರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಇಂದ್ದೇ ಸಮಸ್ಯೆ ಇದೆ. ನೆರೆ ಹಾವಳಿ ಬಂದ ಸಮಯದಲ್ಲಿ ಸರ್ಕಾರವೇ ಜನರಿಗೆ ಆಶ್ರಯ ನೀಡಿದೆ. ಆದರೆ, ಭೂ ದಾಖಲೆಗಳನ್ನು ನೀಡದ ಕಾರಣ ತೊಂದರೆಯಾಗಿದೆ ಎಂದರು.
ಅಲ್ಲದೇ, ಚಿತ್ತಾಕುಲ, ತೋಡುರ, ಮುದಗಾ, ಹಾರವಾಡ, ಬೇಲೆಕೇರಿಯಲ್ಲಿರುವ ಸೀಬರ್ಡ್ ನಿರಾಶ್ರಿತರ ಕಾಲನಿಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಲಾಯಿತು. ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ, ಬಿಜೆಪಿ ಪ್ರಮುಖರಾದ ಹರೀಶ್ ನಾಗೇಕರ್, ಕಿಶೋರ ಕಡವಾಡಕರ್, ರವಿ ಗೌಡ, ಪುಂಡಲಿಕ ಹುಲಸ್ವಾರ, ಚಂದ್ರಕಲಾ ಗೌಡ ಇತರರು ಇದ್ದರು.