

ಕಾರವಾರ: ಇಲ್ಲಿನ ಮಾಲಾದೇವಿ ಮೈದಾನದ ಅಭಿವೃದ್ಧಿಗೆ (ground development) ಮೀಸಲಿಟ್ಟ ಹಣವನ್ನು ಬೇರೆಡೆ ವರ್ಗಾವಣೆ ಮಾಡಿದ್ದು, ಅದನ್ನು ಸಹಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಎಚ್ಚರಿಸಿದ್ದಾರೆ.
ಬಿಜೆಪಿ ಯುವ ಮುಖಂಡ ಪರ್ಬತ್ ನಾಯ್ಕ ಹಾಗೂ ತಮ್ಮ ಸಹಕಾರದಲ್ಲಿ ಮಾಲಾದೇವಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ ಕಾರವಾರದ ವಿವಿಧ ವಾರ್ಡ್ಗಳ ಹಾಗೂ ಗ್ರಾಮ ಪಂಚಾಯಿತಿ ಮಟ್ಟದ 8 ದಿನಗಳ ಕ್ರಿಕೆಟ್ ಪಂದ್ಯಾವಳಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾಲಾದೇವಿ ಮೈದಾನದಲ್ಲಿ ಆಟವಾಡಿದವರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಆದರೆ, ಇಲ್ಲಿ ಶೌಚಗೃಹ, ಬಟ್ಟೆ ಬದಲಾಯಿಸಲು ಕೊಠಡಿಯೂ ಇಲ್ಲ.
ನಮ್ಮ ಮಕ್ಕಳಿಗೆ ಹೀಗಾಗಬಾರದು ಎಂದು ಹಣ ಮಂಜೂರು ಮಾಡಿಸಿದ್ದೆ. ನಾನು ಶಾಸಕಿಯಾಗಿದ್ದಾಗ ಕ್ರೀಡಾಂಗಣದ ಅಭಿವೃದ್ಧಿ(ground development ) ಗೆ 8 ಕೋಟಿ ರೂ. ಹಣವನ್ನು ಮಂಜೂರು ಮಾಡಿಸಿದ್ದೆ. 5 ಕೋಟಿ ರೂ. ಕ್ರೀಡಾಂಗಣದ ಅಭಿವೃದ್ಧಿಗಾದರೆ, ಉಳಿದ 3 ಕೋಟಿ ರೂ. ಸಭಾಭವನ ಹಾಗೂ ಗ್ಯಾಲರಿ ಮತ್ತಿತರ ಕಾಮಗಾರಿಗಳಿಗೆ ಮೀಡಲಿಡಲಾಗಿತ್ತು.
ಕಟ್ಟಡದಲ್ಲಿ ಯುವಕರಿಗೆ 5, ಯುವತಿಯರಿಗೆ 5 ಹೀಗೆ ಹತ್ತು ಶೌಚಗೃಹ ನಿರ್ಮಾಣಕ್ಕೆ ಯೋಜಿಸಲಾಗಿದೆ. ನೆಲಮಹಡಿಯಲ್ಲಿ ಸಾಮಗ್ರಿ ಇಡುವ ಕೊಠಡಿ, ಊಟದ ಹಾಲ್‌ಗಳು, ಕ್ರೀಡಾಪಟುಗಳಿಗೆ ರೂಂ. ಹೀಗೆ ಸುವ್ಯವಸ್ಥಿತ ಯೋಜನೆ ಮಾಡಲಾಗಿತ್ತು.
ಆದರೆ, ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಕೇಳಿದರೆ, ಹಣ ಇಲ್ಲ ಎನ್ನಲಾಗುತ್ತಿದೆ. ಹಣವನ್ನು ಬೇರೆ ಉದ್ದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ನಗರಸಭೆ ಅಧ್ಯಕ್ಷರಾದ ರವಿರಾಜ್ ಅಂಕೋಲೆಕರ್, ಯುವ ನಾಯಕ ಪರ್ಬತ್ ನಾಯ್ಕ, ಪ್ರಮುಖರಾದ ಅಮಿತ್ ಕಾಮತ್, ರತ್ನಾಕರ್ ನಾಯ್ಕ, ಗಿರೀಶ್ ನಾಯ್ಕ, ಅರುಣ ಗುನಗಿ, ಮುರಳೀಧರ ನಾಯ್ಕ, ಡೊಮಿನಿಕ್ ಡಯಾಸ್, ಪ್ರಸನ್ನ ಕಾಮತ್, ರಾಜೇಶ ಶೆಟ್ಟಿ, ಪ್ರಕಾಶ ರೇವಣಕರ, ವಾರ್ಡ್ ಸದಸ್ಯರಾದ ಪ್ರೇಮಾನಂದ ಗುನಗಾ, ದರ್ಶನ್ ನಾಯ್ಕ್, ನಿಲೇಶ್ ಆರ್ಗೇಕರ್, ದಿನೇಶ್ ನಾಯ್ಕ , ಸೋಮು ನಾಯ್ಕ, ಅರವಿಂದ್ ಗುನಗಿ, ಸುಧಾಕರ್ ನಾಯ್ಕ , ಸುಧೀರ್ ನಾಯ್ಕ ಇತರರು ಇದ್ದರು.