ಕಾರವಾರ ಉಪ ನಿಬಂಧಕರ ನ್ಯಾಯಾಲಯ ತಡೆಯಾಜ್ಞೆ

High Court Logo
Published on

ಸಿದ್ದಾಪುರ: ತಾಲೂಕಿನ ರ್ಕಮಕ್ಕಿ ದೊಡ್ಮನೆ ಗ್ರುಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಅವರನ್ನು ಮೂರು ವರ್ಷಗಳವರೆಗೆ ಅನರ್ಹಗೊಳಿಸಿ ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ನೀಡಿದ ಆದೇಶಕ್ಕೆ ಕಾರವಾರ ಉಪ ನಿಬಂಧಕರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಕುಡೆಗೋಡಿನ ಪ್ರಕಾಶ ರಾಮಚಂದ್ರ ಹೆಗಡೆ ನೀಡಿದ ದೂರಿನ ಅನ್ವಯ ವಿಚಾರಣೆ ನಡೆಸಿದ ಶಿರಸಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯವು ಸುಬ್ರಾಯ ಭಟ್ಟ ಹಾಗೂ ವಿವೇಕ ಭಟ್ಟ ಅವರನ್ನು ಅನರ್ಹಗೊಳಿಸಿ ಆದೇಶ ಮಾಡಿದ್ದರು. ಈ ಆದೇಶ ಪ್ರಶ್ನಿಸಿ ಕಾರವಾರ ಸಹಕಾರಿ ಸಂಘಗಳ ಉಪನಿಬಂಧಕರ ನ್ಯಾಯಾಲಯದಲ್ಲಿ ಸುಬ್ರಾಯ ಭಟ್ಟ ಮತ್ತು ವಿವೇಕ ಭಟ್ಟ ಮೇಲ್ಮನವಿ ಸಲ್ಲಿಸಿದ್ದರು.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 29-ಸಿ ಪ್ರಕರಣದ ಆದೇಶದಲ್ಲಿ ಆರೋಪಿಸಿದ ಅಂಶಗಳು ಊಹೆಯಲ್ಲಿ ಸೃಷ್ಟಿಸಿಕೊಂಡು ದಾಖಲಿಸಿದ್ದಾಗಿದೆ. ಸಂಘದ ಲೆಕ್ಕಪರಿಶೋಧನಾ ವರದಿಯಲ್ಲಿ ಈ ಕುರಿತು ಯಾವುದೇ ಆಕ್ಷೇಪಣೆಗಳು ಇರುವುದಿಲ್ಲ. ಅಲ್ಲದೆ, ಸಾಮೂಹಿಕವಾಗಿ ಆಡಳಿತ ಮಂಡಳಿಯಿಂದ ಲೋಪವಾಗಿರುವುದಾಗಿ ಪರಿಗಣಿಸಿದ್ದಲ್ಲಿ ಕೇವಲ ಒಬ್ಬ ಸದಸ್ಯನ ಮೇಲೆ ಕಲಂ 29-ಸಿ ಅಡಿ ಪ್ರಕರಣ ದಾಖಲಿಸಲು ಬರುವುದಿಲ್ಲ. ಅಲ್ಲದೆ, ಆದೇಶವನ್ನು ಮಾಡಲು ಬರಲಾರದು ಎಂದಿದ್ದಾರೆ. ಈಗ ನೀಡಿರುವ ಆದೇಶವನ್ನು ಈ ಅಫೀಲಿನ ಅಂತಿಮ ಆದೇಶದವರೆಗೆ ತಡೆಹಿಡಿಯಬೇಕು. ಅಲ್ಲದೆ ರದ್ದುಗೊಳಿಸಬೇಕು ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಮೇಲ್ಮನವಿದಾರರ ವಾದ ಆಲಿಸಲಾಗಿದೆ. ಎಆರ್ ಆದೇಶದಲ್ಲಿ ಆರೋಪಿಸಿದ ಅಂಶಗಳು ಸಂಘದ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಸಾಮೂಹಿಕವಾಗಿ ಜವಾಬ್ದಾರರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆಡಳಿತ ಮಂಡಳಿಯ ಕೇವಲ ಎರಡು ನಿರ್ದೇಶಕರನ್ನು ಮಾತ್ರ ಕಲಂ 29-ಸಿ ಇದರಡಿ ಅನರ್ಹಗೊಳಿಸಿ ಆದೇಶಿಸಿದ್ದಾರೆ. ಅಲ್ಲದೆ, ಎದುರುದಾರರಿಗೆ ದಾಖಲೆಗಳನ್ನು ಹಾಜರು ಪಡಿಸಲು ಅವಕಾಶ ನೀಡದೇ ಆದೇಶ ಮಾಡಿರುವುದು ಕಂಡುಬರುತ್ತದೆ. ಅಲ್ಲದೆ, ಎದುರುದಾರರಾದ ಸುಬ್ರಾಯ ಭಟ್ಟ, ವಿವೇಕ ಭಟ್ಟ ಅವರಿಗೆ ತಮ್ಮ ಪರ ಸಮಜಾಯಿಸಿ ನೀಡಲು ಸಾಮಾಜಿಕ ನ್ಯಾಯದ ತತ್ವದಡಿ ಕಾಲಾವಕಾಶ ನೀಡಬೇಕಾಗಿತ್ತು. ಅದನ್ನು ನೀಡದಿರುವುದನ್ನು ಡಿಆರ್ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಹೀಗಾಗಿ ಸಹಕಾರ ಸಂಘಗಳ ಕಾಯ್ದೆ 1959 ಕಲಂ 106 (3)ರ ಮೇರೆಗೆ ಹೊಂದಿರುವ ಅಧಿಕಾರ ಚಲಾಯಿಸಿ ಮೇಲ್ಮನವಿದಾರರ ಮಧ್ಯಂತರ ಅರ್ಜಿಯನ್ನು ಪರಿಗಣಿಸಲು ತೀರ್ವನಿಸಿದೆ. ಎಆರ್ ಹೊರಡಿಸಿದ ಅನರ್ಹತೆ ಆದೇಶವನ್ನು ಡಿಆರ್ ನ್ಯಾಯಾಲಯ ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿದೆ. ಪ್ರಕರಣ ಮುಂದಿನ ವಿಚಾರಣೆ ಡಿಸೆಂಬರ್ 31ಕ್ಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net