ಗುಡ್ಡದ ಬುಡದಲ್ಲಿರುವವರಿಗೆ ಗಂಡಾಂತರ

Water-Entered-in-house
Published on

ಕಾರವಾರ: ಬೈತಖೋಲ್ ಭೂದೇವಿ ಗುಡ್ಡ ಕಡಿದು ನೌಕಾಸೇನೆ ರಸ್ತೆ ಮಾಡಿದ್ದು, ಮೊದಲ ಮಳೆಗೇ ಮಣ್ಣು ಕರಗಿ ನೀರಿನ ಜತೆ ಮನೆಗಳಿಗೆ ನುಗ್ಗಲಾರಂಭಿಸಿದೆ. ಇದರಿಂದ ಗುಡ್ಡದ ಬುಡದಲ್ಲಿ 150 ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲಿವೆ.


ನೌಕಾನೆಲೆ ವ್ಯಾಪ್ತಿಯ ಗಡಿ ರಕ್ಷಣೆಗಾಗಿ ಈಗಾಗಲೇ ತಂತಿ ಬೇಲಿ ಅಳವಡಿಸಲಾಗಿದೆ. ಅದರ ಪಕ್ಕದಲ್ಲೇ ಸುಮಾರು 20 ಕಿಮೀಗೂ ಹೆಚ್ಚು ಉದ್ದದ ಕಚ್ಚಾ ರಸ್ತೆ ಮಾಡಲಾಗುತ್ತಿದೆ.

ಅದರ ಭಾಗವಾಗಿ ನಗರದ ಬೈತಖೋಲ್ ಮೀನುಗಾರಿಕೆ ಬಂದರಿನ ಹಿಂದಿರುವ ಭೂದೇವಿ ಗುಡ್ಡವನ್ನು ಸುತ್ತುವರಿದು ಲೇಡೀಸ್ ಬೀಚ್ ಮಾರ್ಗವಾಗಿ ವಾಪಸ್ ನೌಕಾನೆಲೆ ತಲುಪುವಂತೆ ಕಡಿದಾದ ಗುಡ್ಡವನ್ನು ಅರ್ಧ ಕತ್ತರಿಸಿ ರಸ್ತೆ ಮಾಡಲಾಗಿದೆ. ನೂರಾರು ಮರಗಳನ್ನು ಉರುಳಿಸಲಾಗಿದೆ.

ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಕಾಮಗಾರಿ ಈಗ ಮುಕ್ತಾಯ ಹಂತದಲ್ಲಿದೆ.
ಆತಂಕ:
ಗುಡ್ಡದ ಮೇಲಿಂದ ಹಲವೆಡೆ ದೊಡ್ಡ ಝರಿಯ ಮಾದರಿಯಲ್ಲಿ ನೀರು ಹರಿದು ಬರುತ್ತಿತ್ತು. ಆ ನೀರಿನ ಮೂಲಗಳನ್ನು ಬಂದ್ ಮಾಡಲಾಗಿದೆ. ನೀರು ಹರಿಯುವ ದಾರಿಯಲ್ಲಿ ಮಣ್ಣು ತುಂಬಲಾಗಿದೆ.

ಶನಿವಾರ ಮೊದಲ ಮಳೆಗೆ ಗುಡ್ಡದಿಂದ ಎಲ್ಲೆಂದರಲ್ಲಿ ನೀರು ಹರಿದು ಬಂತು. ಅದರ ಜತೆಗೆ ಈಗ ತಾನೇ ತೆರವು ಮಾಡಿದ ಹಸಿ ರಾಡಿ ಮಣ್ಣನ್ನೂ ಹೊತ್ತು ತರುತ್ತಿದೆ. ಗುಡ್ಡದ ಮೇಲೆ ಸಾಕಷ್ಟು ಕಲ್ಲುಗಳು ಉರುಳಿ ಬೀಳುವ ಹಂತದಲ್ಲಿವೆ.


ಇಳಿಜಾರಿನ ಗುಡ್ಡ ಕಡಿದು, ನೀರು ಇಂಗಲು ಅವಕಾಶ ನೀಡಿದ್ದರಿಂದ ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿದು ಬರುವ ಆತಂಕವಿದೆ. ಬೈತಖೋಲ್ ಮೀನುಗಾರಿಕೆ ಬಂದರಿನ ಭಾಗದಲ್ಲಿ ಅರ್ಧ ಗುಡ್ಡದ ಮೇಲೆಯೇ 50 ಕ್ಕೂ ಹೆಚ್ಚು ಮನೆಗಳಿವೆ.

ಇನ್ನು ಭೂದೇವಿವಾಡ, ಗೌಡವಾಡ ಭಾಗದಲ್ಲಿ ಗುಡ್ಡದ ಬುಡದಲ್ಲಿ ನೂರಕ್ಕೂ ಅಧಿಕ ಮನೆಗಳಿವೆ. ಈ ಎಲ್ಲರೂ ಈಗ ಜೀವ ಹಿಡಿದುಕೊಂಡು ಜೀವನ ನಡೆಸುವಂತಾಗಿದೆ.
ವಿರೋಧ:
ನೌಕಾನೆಲೆ ಕಾಮಗಾರಿಗೆ ಸ್ಥಳೀಯರು ವರ್ಷಗಳಿಂದ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರು. ಕಳೆದ ಜನವರಿ ಹೊತ್ತಿನಲ್ಲಿ ಬೃಹತ್ ಪ್ರತಿಭಟನೆಯನ್ನೂ ಮಾಡಿದ್ದರು.

ಈ ಸಂಬಂಧ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಒಮ್ಮೆ ಸಭೆಯೂ ನಡೆದಿತ್ತು. ಆದರೆ, ನೌಕಾಸೇನೆ ಯಾವುದೇ ಪ್ರತಿಭಟನೆ, ಪ್ರಭಾವಗಳಿಗೆ ಮಣಿಯದೇ ತನ್ನ ಕಾರ್ಯವನ್ನು ಮುಂದುವರಿಸಿದೆ.

ಮೊದಲ ಮಳೆಗೇ ಬೈತಖೋಲ್‌ನಲ್ಲಿ ಮನೆಗಳಿಗೆ ರಾಡಿ ನೀರು ನುಗ್ಗಿದೆ. ಯಾವುದೇ ಕ್ಷಣದಲ್ಲೂ ಗುಡ್ಡ ಕುಸಿಯುವ ಆತಂಕವಿದೆ. ತಕ್ಷಣ ಏನಾದರೂ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ.ಪ್ರೀತಮ್ ಮಾಸೂರಕರ್ಬೈತಖೋಲ್ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net