ಕಡಲ ತೀರ ಕಸದ ಆಗರ

Karwar beach
Published on

ಕಾರವಾರ: ಪ್ರವಾಸೋದ್ಯಮ ಸಮಿತಿ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣ ನೀಡಿ, ನಗರಸಭೆ ಕಡಲ ತೀರ ಸ್ವಚ್ಛತೆಯನ್ನು ಬಂದ್ ಮಾಡಿದೆ. ಮಳೆಗಾಲ ಮುಗಿದು ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುವ ಕಾಲದಲ್ಲಿ ಕಡಲ ತೀರ ತ್ಯಾಜ್ಯಗಳ ಆಗರವಾಗಿದೆ. ಮೂಡ ಗಾಳಿ ಬೀಸುತ್ತಿರುವುದರಿಂದ ಕಡಲು ತನ್ನೊಡಲಿನ ಹೊಲಸನ್ನು ದೊಡ್ಡ ಪ್ರಮಾಣದಲ್ಲಿ ದಡಕ್ಕೆ ತಂದು ಎಸೆಯುತ್ತಿದೆ. ಮಳೆಯ ಕಾರಣಕ್ಕೆ ತೀರದ ವಿವಿಧೆಡೆ ಗಿಡ, ಗಂಟಿಗಳು ಬೇಳೆದುಕೊಂಡಿವೆ. ಆದರೆ, ಇವ್ಯಾವವನ್ನೂ ಸ್ವಚ್ಛ ಮಾಡದ ಕಾರಣ ಇಡೀ ತೀರ ಹಾಳು ಕೊಂಪೆಯಾಗಿದೆ. ಪ್ರವಾಸಿಗರು ಬಂದು ಹೇಸಿಗೆಪಡುವಂತಾಗಿದೆ. ಸಮಸ್ಯೆ ಆಗಿದ್ದೇನು..? ಕಡಲ ತೀರದ ಸ್ವಚ್ಛತೆಯನ್ನು ನಗರಸಭೆಗೆ ವಹಿಸಿ ಎರಡು ವರ್ಷಗಳು ಕಳೆದಿವೆ. ಈ ಹಿಂದೆ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಖರೀದಿಸಿದ್ದ ಕಡಲ ತೀರ ಸ್ವಚ್ಛತೆಯ ಯಂತ್ರವನ್ನು ಸಮಿತಿ ನಗರಸಭೆಗೆ ಹಸ್ತಾಂತರಿಸಲಾಗಿತ್ತು. ಆದರೆ, ಯಂತ್ರ ಹಾಳಾಗಿ ಗೂಡು ಸೇರಿ ಹಲವು ತಿಂಗಳುಗಳೇ ಕಳೆದಿವೆ. ಅದರ ರಿಪೇರಿಗೆ 2 ಲಕ್ಷ ರೂ. ಬೇಕಾಗಿದೆ. ಅಲ್ಲದೇ, ಕಡಲ ತೀರ ಸ್ವಚ್ಛತೆಗಾಗಿ ನಗರಸಭೆಗೆ ಪಾವತಿಸುವುದಾಗಿ ಜಿಲ್ಲಾ ಪ್ರವಾಸೋದ್ಯಮ ಸಮಿತಿ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದೆ. ಹಾಗಾಗಿ ತೀರ ಸ್ವಚ್ಛತೆಯನ್ನು ನಿಲ್ಲಿಸಲು ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಮಾತ್ರವಲ್ಲ. ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿರುವ ಫುಡ್ ಕೋರ್ಟ್, ಮಯೂರವರ್ಮ ವೇದಿಕೆಯಲ್ಲಿ ನಡೆಯುವ ಉತ್ಸವ, ಕಾರ್ಯಕ್ರಮ, ಯುದ್ಧ ನೌಕೆ ಹಾಗೂ ವಿಮಾನ ವಸ್ತು ಸಂಗ್ರಹಾಲಯಗಳಿAದ ಬರುವ ಶುಲ್ಕ ವಸೂಲಿಯನ್ನು ಜಿಲ್ಲಾ ಪ್ರವಾಸೋದ್ಯಮ ಸಮಿತಿ ಮಾಡುತ್ತಿದೆ. ಆದರೆ, ಸ್ವಚ್ಛತೆ ಮಾಡುವ ಖರ್ಚಿನ ಕಾರ್ಯ ಮಾತ್ರ ನಮಗೇಕೆ ಎಂಬುದು ನಗರಸಭೆಯ ಆಡಳಿತ ಮಂಡಳಿಯ ಪ್ರಶ್ನೆಯಾಗಿದೆ. ಶೌಚಗೃಹ ಸ್ವಚ್ಛಗೊಳಿಸಿದ ಪಹರೆ ಪಹರೆ ಸಂಸ್ಥೆಯ ಕಾರ್ಯಕರ್ತರು ಟ್ಯಾಗೋರ್ ಕಡಲ ತೀರದ ಶೌಚಗೃಹವನ್ನು ಶನಿವಾರ ಸ್ವಚ್ಛ ಮಾಡಿದರು. ಶೌಚಗೃಹದ ಮೇಲೆ ಹುಲ್ಲು ಬೆಳೆದು, ಸುತ್ತಲೂ ಗಿಡ ಗಂಟಿಗಳು ಬೆಳೆದು ಹಾಳಾಗಿತ್ತು. ಶನಿವಾರ ಅವುಗಳನ್ನು ತೆರವು ಮಾಡಲಾಯಿತು. ಬರುವ ವಾರವೂ ಇಲ್ಲೇ ಸ್ವಚ್ಛತೆ ಮಾಡಲಾಗುವುದು ಎಂದು ಪಹರೆ ಸದಸ್ಯರು ತಿಳಿಸಿದ್ದಾರೆ.

...........

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ

ಮಂಗಳಗೌರಿ ಭಟ್

ಕಡಲ ತೀರ ಸ್ವಚ್ಛತೆಗೆ ನಗರಸಭೆ ನೀಡಬೇಕಾದ ಹಣವನ್ನು ಶೀಘ್ರ ಪಾವತಿ ಮಾಡಲಾಗುವುದು. ಸ್ವಚ್ಛತೆಯ ಯಂತ್ರವನ್ನು ರಿಪೇರಿ ಮಾಡಲು ನಗರಸಭೆಯ ಜತೆ ಮಾತನಾಡಿ ಕ್ರಮ ವಹಿಸಲಾಗುವುದು. ಅಲ್ಲದೇ ಪ್ರವಾಸೋದ್ಯಮ ಸಮಿತಿಯಿಂದಲೇ ತಾತ್ಕಾಲಿಕವಾಗಿ ಇಬ್ಬರು ಸ್ವಚ್ಛತಾಗಾರರನ್ನು ನಿಯೋಜನೆ ಮಾಡಲಾಗುವುದು.

...........

ಎಂಎಲ್‌ಸಿ

ಗಣಪತಿ ಉಳ್ವೇಕರ್

ನಗರಸಭೆಯಿಂದ ಸರಿಯಾಗಿ ಸ್ವಚ್ಛತೆ ಮಾಡುತ್ತಿಲ್ಲ. ಪ್ರವಾಸೋದ್ಯಮ ಸಮಿತಿಯೂ ಮೇಲ್ವಿಚಾರಣೆ ಮಾಡುತ್ತಿಲ್ಲ. ಕಡಲ ತೀರ ಸ್ವಚ್ಛತೆ ಇಲ್ಲದಾಗಿದೆ. ಪ್ರವಾಸಿ ಬೋಟಿಂಗ್ ಚಟುವಟಿಕೆ ಗುತ್ತಿಗೆ ಪಡೆದ ವೇವ್ ಅಡ್ವೆಂಚರ್ ಸಂಸ್ಥೆಯ ಸಿಬ್ಬಂದಿಯೇ ಅಲ್ಲಲ್ಲಿ ಸ್ವಚ್ಛತೆಯ ಕಾರ್ಯ ಮಾಡಿಕೊಳ್ಳುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net