ಕಾರವಾರ ವಿಮಾನ ನಿಲ್ದಾಣ ನಿರ್ಮಾಣ ಯಾವಾಗ..? ನೌಕಾಸೇನೆ ಮುಖ್ಯಸ್ಥರು ನೀಡಿದ ಮಾಹಿತಿ ಇಲ್ಲಿದೆ

Karwar-airport
Published on

ಕಾರವಾರ: ಎಲ್ಲವೂ ಯೋಜನೆಯಂತೆ ನಡೆದರೆ ಅಂಕೋಲಾದ ಅಲಗೇರಿಯಲ್ಲಿ ಇನ್ನು 5 ವರ್ಷಗಳಲ್ಲಿ ವಿಮಾನ ನಿಲ್ದಾಣ ಸಿದ್ಧವಾಗಲಿದೆ.

ಭಾರತೀಯ ನೌಕಾಸೇನೆಯ ಮುಖ್ಯಸ್ಥ ಆರ್.ಹರಿಕುಮಾರ್ ಅವರು ಗುರುವಾರ ಗೋವಾದ ಪಣಜಿಯಲ್ಲಿ ಮಾಧ್ಯಮಗಳಿಗೆ ಈ ವಿಷಯವನ್ನು ವಿವರಿಸಿದ್ದಾರೆ.
ವಿಮಾನ ನಿಲ್ದಾಣದ ಟೆಂಡರ್ ಪ್ರಕ್ರಿಯೆಗಳು ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಗುತ್ತಿಗೆ ಒಪ್ಪಂದಕ್ಕೆ ಸಹಿಯಾದ ಬಳಿಕ ನಾಲ್ಕು ವರ್ಷಗಳಲ್ಲಿ ವಿಮಾನ ನಿಲ್ದಾಣ ಸಿದ್ಧವಾಗಲಿದೆ ಎಂದಿದ್ದಾರೆ.

2700 ಮೀಟರ್ ಮುಖ್ಯ ರನ್‌ವೇ ಹಾಗೂ ನಂತರ ಪಕ್ಕದಲ್ಲಿ ಇನ್ನೂ ಕೆಲವು ರನ್‌ವೇಗಳು ಬರಲಿವೆ. ಅದರ ಜತೆಗೆ ನಿಯಂತ್ರಣ ಗೋಪುರ, ಆಡಳಿತ ಕಚೇರಿ ಮುಂತಾದ ಸೌಲಭ್ಯಗಳು ನಿರ್ಮಾಣವಾಗಲಿವೆ ಎಂದು ಅವರು ವಿವರಿಸಿದ್ದಾರೆ. ಸಾಗರ ಭದ್ರತೆಗೆ ಸಂಬಂಧಿಸಿದಂತೆ ವಿಮಾನಗಳು, ಹೆಲಿಕಾಫ್ಟರ್‌ಗಳು ಹಾಗೂ ಯುಎವಿ ಡ್ರೋನ್‌ಗಳು ಇಲ್ಲಿಂದ ಕಾರ್ಯಾಚರಿಸಲಿವೆ ಎಂದು ವಿವರಿಸಿದ್ದಾರೆ. ಗೋವಾದ ಹಂಸ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

ಗೋವಾದಿಂದಲೇ ಉದ್ಘಾಟನೆ:
ಮಂಗಳವಾರ ಗೋವಾಕ್ಕೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅಲ್ಲಿ ನೌಕಾ ಯುದ್ಧ ತರಬೇತಿ ಮಹಾ ವಿದ್ಯಾಲಯವನ್ನು ಉದ್ಘಾಟಿಸಿದರು. ನಂತರ ಅಲ್ಲಿಂದಲೇ ಕಾರವಾರ ಕದಂಬ ನೌಕಾನೆಲೆಯಲ್ಲಿ ಸೀಬರ್ಡ್ ನೌಕಾ ಯೋಜನೆಯ 2ಎ ದಡಿ ನಿರ್ಮಾಣವಾಗಿರುವ ಎರಡು ಹೊಸ ಜಟ್ಟಿಗಳು ಹಾಗೂ ಇತರ ಸೌಲಭ್ಯಗಳನ್ನು ಉದ್ಘಾಟನೆ ಮಾಡಿದರು. ನಂತರ ಅವರು ವಿಕ್ರಮಾದಿತ್ಯ ನೌಕೆಯಲ್ಲಿ ಆಯೋಜನೆಯಾಗಿದ್ದ ನೌಕಾ ಅಽಕಾರಿಗಳ ಸಮಾವೇಶದಲ್ಲಿ ಪಾಲ್ಗೊಂಡರು ಎಂದು ಅವರು ತಿಳಿಸಿದ್ದಾರೆ.

ಭೂ ಸ್ವಾಧೀನ ವಿಳಂಬ

ನೌಕಾ ವಿಮಾನ ನಿಲ್ದಾಣದ ಜತೆ ನಾಗರಿಕ ವಿಮಾನಯಾನಕ್ಕೂ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಭೂ ಸ್ವಾಧೀನ ಮಾಡಿಕೊಂಡಿರುವ ಭೂಮಿಯಲ್ಲಿ ಭಾರತೀಯ ನೌಕಾಸೇನೆಯು ರನ್‌ ವೇ ಹಾಗೂ ಇತರ ರನ್‌ವೇ ನಿರ್ಮಾಣ ಮಾಡಲಿದೆ. ಆದರೆ, ನಾಗರಿಕ ವಿಮಾನ ಯಾನಕ್ಕೆ ಏರ್‌ ಬಸ್‌ನಂಥ ದೊಡ್ಡ ವಿಮಾನಗಳು ಇಳಿಯಲು ಇನ್ನಷ್ಟು ಉದ್ದದ ರನ್‌ವೇ ಬೇಕಾಗಿದೆ. ಅದಕ್ಕಾಗಿ ಬೇಕಾಗಿರುವ ಭೂಮಿಯನ್ನು ಸ್ವಾಧೀನ ಮಾಡಿಕೊಡಿ ಹಾಗೂ ಹೆಚ್ಚುವರಿ ರನ್‌ವೇ ನಿರ್ಮಾಣ ಮಾಡಿಕೊಳ್ಳಿ ಎಂದು ರಕ್ಷಣಾ ಇಲಾಖೆ ಕರ್ನಾಟಕ ಸರ್ಕಾರಕ್ಕೆ ತಿಳಿಸಿದೆ. ಬೇಲೇಕೇರಿ, ಬಾವಿಕೇರಿ ಗ್ರಾಮಗಳ 87 ಎಕರೆ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳುವ ಸಂಬಂಧ 2021 ರಲ್ಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಗ್ರಾಮಸ್ಥರು ಜಮೀನಿಗೆ ಹೆಚ್ಚುವರಿ ಪರಿಹಾರ ಕೋರುತ್ತಿದ್ದು, ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕೆ ಸಚಿವ ಎಂಬಿ ಪಾಟೀಲ್‌ ಎರಡು ಹಂತದ ಸಭೆ ನಡೆಸಿ, ಹೆಚ್ಚುವರಿ ಪರಿಹಾರ ಹಾಗೂ ಕೆಲವು ಸೌಲಭ್ಯಗಳಿಗೆ ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ನೌಕಾಸೇನೆ ತನ್ನ ಪಾಲಿನ ಕಾಮಗಾರಿಗಳ ಟೆಂಡರ್‌ ಕರೆದಿದೆ. ರಾಜ್ಯದ ಪಾಲಿನ ಕಾಮಗಾರಿಗಳನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮ(ಕೆಎಸ್‌ಐಐಡಿಸಿ)ಕ್ಕೆ ವಹಿಸಲಾಗಿದೆ. ನಂತರ ನಿಗಮವು ಟೆಂಡರ್‌ ಕರೆದು ಕಾಮಗಾರಿ ಹಂಚಿಕೆ ಮಾಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net