ಜಿಲ್ಲಾದ್ಯಂತ ವಿಜೃಂಭಣೆಯ ಕಾರ್ತಿಕೋತ್ಸವ

Antaragnange
Published on

ಕಾರ್ತಿಕ ಮಾಸದ ಕೊನೆಯ ಸೋಮವಾರ ಅಂಗವಾಗಿ ಜಿಲ್ಲೆಯ ಶಿವಾಲಯಗಳಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ದೇವರ ಮೆರವಣಿಗೆ, ಅನ್ನ ಪ್ರಸಾದ ವ್ಯವಸ್ಥೆ ಸೇರಿ ವಿವಿಧೆಡೆ ದಿಪೋತ್ಸವ ಆಚರಿಸಲಾಯಿತು. ಸುಪ್ರಸಿದ್ಧ ಅಂತರಗಂಗೆ ಮತ್ತು ಕೋಟಿಲಿಂಗೇಶ್ವರ ಸನ್ನಿಧಿಗೆ ಭೇಟಿ ನೀಡಿದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಕೋಲಾರ ನಗರ, ಗ್ರಾಮೀಣ ಸೇರಿ ತಾಲೂಕುಗಳು ಮತ್ತು ಹೋಬಳಿ ಕೇಂದ್ರಗಳಲ್ಲೂ ಅದ್ದೂರಿಯಾಗಿ ಕಾರ್ತಿಕೋತ್ಸವವನ್ನು ಆಚರಿಸಿದರು. ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ದೇಗುಲಗಳಲ್ಲಿ ಪೂಜೆ ಸಲ್ಲಿಸಿದರು. ಅನೇಕ ದೇವಸ್ಥಾನಗಳಲ್ಲಿ ಬೆಳಗ್ಗೆ 3ಗಂಟೆಯಿಂದಲೇ ವಿಶೇಷ ಪೂಜೆಗಳು ಆರಂಭವಾದವು, ಬೆಳಗ್ಗೆಯಿಂದ ರಾತ್ರಿ 11 ಗಂಟೆಯವರೆಗೂ ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

 ಕೋಲಾರ : ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಜಿಲ್ಲೆಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ವಿಶೇಷ ಹೂವಿನ ಅಲಂಕಾರ ನೆರವೇರಿದವು. ಸಾವಿರಾರು ಭಕ್ತರು ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು.

ನಗರದ ಸೋಮೇಶ್ವರ ದೇವಾಲಯ, ಅಂತರಗಂಗೆ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ, ಮುನೇಶ್ವರ ನಗರ ಈಶ್ವರ ದೇವಾಲಯ, ಅರಳಪೇಟೆ ಬಡಾವಣೆಯ ಬಸವೇಶ್ವರ ದೇವಾಲಯ, ತಾಲೂಕಿನ ಮಾರ್ಕಂಡೇಶ್ವರ ದೇವಾಲಯದಲ್ಲಿ ಸಂಭ್ರಮ ಮನೆ ಮಾಡಿತ್ತು.

ನಗರ ಹೊರವಲಯದಲ್ಲಿರುವ ದಕ್ಷಿಣ ಕಾಶಿ ಖ್ಯಾತಿಯ ಅಂತರಗಂಗೆ ವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿ ಭಕ್ತ ಸಾಗರವೇ ಸೇರಿತ್ತು. ಜಿಲ್ಲೆ, ರಾಜ್ಯ, ಹೊರರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಲ್ಲಿನ ಬಸವನ ಬಾಯಿಂದ ಬರುವ ಪವಿತ್ರ ಜಲ ಪ್ರೋಕ್ಷಣೆ ಮಾಡಿಕೊಂಡರು. ಸಾವಿರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದು ಹರಿಕೆ ತೀರಿಸಿಕೊಂಡರು.

ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಿಂದ ವಿಶ್ವ ಹಿಂದು ಪರಿಷತ್​, ಬಜರಂಗದಳ ಕಾರ್ಯಕರ್ತರು ಮುಂಜಾನೆಯಿಂದಲೇ ಉಚಿತ ಸಾರಿಗೆ ವ್ಯವಸ್ಥೆ ಮಾಡಿದ್ದರು. ಬಸ್​ ನಿಲ್ದಾಣ ವೃತ್ತದಲ್ಲಿ ಭಕ್ತಾಧಿಗಳಿಗೆ ಸ್ವಾಗತ ಕೋರುವ ಬೃಹತ್​ ಕಮಾನುಗಳೊಂದಿಗೆ ಇಡೀ ಪ್ರದೇಶ ಕೇಸರಿಮಯಗೊಂಡಿತ್ತು. ಬೃಹತ್​ ಎತ್ತರದ ಭಜರಂಗಿ ಮತ್ತು ಶಿವನ ್ಲೇಕ್ಸ್​ ರಾರಾಜಿಸುತ್ತಿತ್ತು.

ಬೆಟ್ಟದ ತಪ್ಪಲಿನ ಜಲಕಂಠೇಶ್ವರ ಸನ್ನಿಧಿಯಲ್ಲಿ ಬಜರಂಗದಳ, ವಿಶ್ವ ಹಿಂದು ಪರಿಷತ್​, ಗೋಕುಲ ಮಿತ್ರಬಳಗ ಸೇರಿ ವಿವಿಧ ಸಂಘಟನೆಗಳಿಂದ ಅನ್ನದಾನ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಪ್ರಧಾನ ಅರ್ಚಕ ಮಂಜುನಾಥ ದೀಕ್ಷಿತ್​ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ ನಡೆಯಿತು. ಶಿವಲಿಂಗ ದರ್ಶನಕ್ಕೆ ಸುಗಮ ವ್ಯವಸ್ಥೆ ಮಾಡಿಕೊಡಲು ಹಲವು ಸ್ವಯಂ ಸೇವಕರು ಕಾರ್ಯನಿರ್ವಹಿಸಿದರು. ಯಾವುದೇ ರೀತಿಯ ಅಹಿತಕರ ಟನಗಳು ಸಂಭವಿಸದಂತೆ ಬಿಗಿ ಪೊಲೀಸ್​ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿತ್ತು.

ಮಾರ್ಕಂಡೇಶ್ವರ ಬೆಟ್ಟದಲ್ಲಿ ಪೂಜೆ: ಕೋಲಾರ ತಾಲೂಕಿನ ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬೆಟ್ಟದ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಕಾರ್ತಿಕ ಮಾಸದ ಪ್ರಯುಕ್ತ ಡಿ.3ರಂದು ಅಮವಾಸ್ಯೆಯ ದಿನ ಬೆಟ್ಟದಲ್ಲಿ ಲಕ್ಷ ದೀಪೋತ್ಸವ ಮತ್ತು ವಿದ್ಯುತ್​ ದೀಪಾಲಂಕಾರ ಪೂಜಾ ಕೈಂಕರ್ಯಗಳು ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.

ಸೋಮೇಶ್ವರಸ್ವಾಮಿಗೆ ಪಂಚಾಮೃತಾಭಿಷೇಕ: ಕೋಲಾರದ ಇತಿಹಾಸ ಪ್ರಸಿದ್ಧ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಬೆಳಗ್ಗೆ ಪಂಜಾಮೃತ ಅಭಿಷೇಕ ವಿವಿಧ ಹಣ್ಣುಗಳ ಅಲಂಕಾರ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಪಡೆದರು. ದೇವಾಲಯದ ಆವರಣದಲ್ಲಿನ ನಂದಿಯ ಮುಂದೆ ನಿಂಬೆ ಹಣ್ಣಿನ ದೀಪ ಬೆಳಗಿಸಿ ಹರಿಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net