

ಮದ್ದೂರು: ಕಾರ್ತಿಕ ಮಾಸದ ಮೊದಲ ಕಾರ್ತಿಕ ಸೋಮವಾರದ ಅಂಗವಾಗಿ ತಾಲೂಕು ಸೇರಿದಂತೆ ಪಟ್ಟಣ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ತಾಲೂಕಿನ ಸೋಮನಹಳ್ಳಿ ಶ್ರೀ ಮಹದೇಶ್ವರಸ್ವಾಮಿ, ಚನ್ನೇಗೌಡನದೊಡ್ಡಿ ಮಹದೇಶ್ವರ ಹಾಗೂ ಮುತ್ತುರಾಯಸ್ವಾಮಿ, ಆಲೂರು ಬೀರೇಶ್ವರ, ಚಾಪುರದೊಡ್ಡಿ ಮಹದೇಶ್ವರಸ್ವಾಮಿ ಸೇರಿದಂತೆ ಪಟ್ಟಣ ವ್ಯಾಪ್ತಿಯ ಹಳೆ ಬಸ್ ನಿಲ್ದಾಣದ ಬಳಿಯಿರುವ ಕಾಶಿವಿಶ್ವೇಶ್ವರ ವಿಶಾಲಾಕ್ಷಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು.
ಪುರಾಣ ಪ್ರಸಿದ್ಧ ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರ ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಶಿಂಷಾ ನದಿಯಲ್ಲಿ ಮಿಂದು ಬಳಿಕ ಹರಕೆ ಸಲ್ಲಿಸಿ, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶಿಂಷಾ ನದಿಯಲ್ಲಿ ಭಕ್ತಾದಿಗಳು ಸ್ನಾನ ಮಾಡಿ ದೇವರ ದರ್ಶನ ಪಡೆದರೆ ಚರ್ಮವ್ಯಾದಿ ಗುಣಮುಖವಾಗುತ್ತದೆ ಎಂಬುದು ಭಕ್ತಾದಿಗಳ ನಂಬಿಕೆಯಾಗಿದೆ. ಆದ್ದರಿಂದ ಪ್ರತಿ ಸೋಮವಾರ ನಡೆಯುವ ವಿಶೇಷ ಪೂಜಾ ದಿನದಂದು ತಾಲೂಕು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ನೂರಾರು ಸಂಖ್ಯೆಯ ಭಕ್ತರು ವೈದ್ಯನಾಥೇಶ್ವರ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸುವುದು ವಿಶೇಷವಾಗಿದೆ.
ದೇವಾಲಯದಲ್ಲಿ ಮೂರ್ತಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿದ ಬಳಿಕ ಭಕ್ತಾದಿಗಳಿಗೆ ಪ್ರಸನ್ನ ಪಾರ್ವತಾಂಭ ಸೇವಾ ಟ್ರಸ್ಟ್ ವತಿಯಿಂದ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.