

ಕಾರಟಗಿ: ಸ್ವತಂತ್ರ ಒಕ್ಕೂಟ ರಚನೆಯ ಸಂದರ್ಭದಲ್ಲಿ ನಿಜಾಮರ ಆಳ್ವಿಕೆಯಿಂದ ಕಲ್ಯಾಣ ಕರ್ನಾಟಕ ಭಾಗವೂ ವಿಮೋಚನೆಗೊಳ್ಳಲು ಅನೇಕ ಮಹನೀಯರ ಹೋರಾಟ, ತ್ಯಾಗ, ಬಲಿದಾನ ಅವಿಸ್ಮರಣೀಯ ಎಂದು ತಹಸೀಲ್ದಾರ್ ಎಂ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಸಿದ್ಧೇಶ್ವರ ರಂಗಮಂದಿರದಲ್ಲಿ ತಾಲೂಕಾಡಳಿತ, ತಾಪಂ ಹಾಗೂ ಪುರಸಭೆಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸರ್ಕಾರ ಈ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದು, ನಾವೆಲ್ಲರೂ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಜತೆಗೆ ಸರ್ವಾಂಗೀಣ ಪ್ರಗತಿಗೆ ಒಗ್ಗಟ್ಟಾಗಿ ಮುಂದುವರೆಯಬೇಕು ಎಂದರು.
ತಾಪಂ ಇಒ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸದಸ್ಯ ದೊಡ್ಡ ಬಸವರಾಜ ಬೂದಿ, ಸ.ನೌ.ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ನಾಗರಾಜ ಅರಳಿ, ತಾಲೂಕಾಧ್ಯಕ್ಷ ದೇವರಾಜ ಬಾವಿಕಟ್ಟಿ, ಸದಸ್ಯರಾದ ಚಂದ್ರು ಚಿರ್ಚನಗುಡ್ಡ, ಮುತ್ತಣ್ಣ, ಕಲೀಂಪಾಶಾ, ಶಕುಂತಲಾ, ರೇಣುಕಮ್ಮ ನಾಯಕ, ಆಶ್ರಯ ಸಮಿತಿಯ ಖಾಜಾಹುಸೇನ್ ಮುಲ್ಲಾ, ಪಿಎಸ್‌ಐ ಕಾಮಣ್ಣ ಇತರರಿದ್ದರು.
ಕಾಟಾಚಾರಕ್ಕೆ ಆಚರಣೆ
ತಾಲೂಕಾಡಳಿತ, ತಾಪಂ ಹಾಗೂ ಪುರಸಭೆಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಕಾಟಾಚಾರಕ್ಕೆ ಎಂಬಂತೆ ನಡೆಯಿತು.
ತ್ಯಾಗ, ಬಲಿದಾನದ ಹೋರಾಟದಿಂದ ವಿಮೋಚನೆಗೊಂಡ ಸವಿನೆನಪಿಗಾಗಿ ಪ್ರತಿವರ್ಷ ಸೆ.17ರಂದು ನಡೆಯುವ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ತಾಲೂಕಾಡಳಿತದ ಅಧಿಕಾರಿಗಳು ಮೇಲ್ನೋಟಕ್ಕೆ ಶಿಷ್ಠಾಚಾರಕ್ಕೆ ನಡೆಸಿದ್ದು ಎಂಬಂತೆ ಕಂಡುಬಂತು.
ಒಂದೆರಡು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಎರಡು ಶಾಲೆಗಳ ವಿದ್ಯಾರ್ಥಿಗಳು, ಬೆರಳಣಿಕೆಯಷ್ಟು ಸಾರ್ವಜನಿಕರನ್ನು ಬಿಟ್ಟರೆ ಸಭಿಕರ ಸಾಲಿನಲ್ಲಿ ಬಹುತೇಕ ಖುರ್ಚಿಗಳು ಖಾಲಿಯಾಗಿಯೇ ಉಳಿದಿದ್ದವು.
ಇನ್ನು, ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಲ್ಲಿಯೂ ಪುರಸಭೆ ಆಡಳಿತ ಧ್ವಜಾರೋಹಣ ನೆರವೇರಿಸಲಿಲ್ಲ.