

ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವವರಿಗೆ ಸಾಗುವಳಿ ಚೀಟಿ ನೀಡಲು ಆಗ್ರಹಿಸಿ ಕೃಷಿ ಪ್ರಾಂತ ಕೂಲಿಕಾರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ತಹಸಿಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಸರ್ಕಾರಿ ಭೂಮಿಯ ಸರ್ವೇ ನಂ.63,7,8,9,10, 117,118ರಲ್ಲಿ ಅನೇಕ ವರ್ಷಗಳಿಂದ ಉಳುಮೆ ಮಾಡುತ್ತಿದ್ದು ಫಾರಂ ನಂ.53, 57, 50 ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಈವರೆಗೆ ನಮಗೆ ಸಾಗುವಳಿ ಚೀಟಿ ನೀಡಿಲ್ಲ. ಇದರ ಜತೆಗೆ ಹುಳ್ಕಿಹಾಳ ಹಾಗೂ ಯರಡೋಣ ಗ್ರಾಮದಲ್ಲಿ ಇದೇ ರೀತಿ ಸಾಗುವಳಿ ಮಾಡುತ್ತ ಬಂದವರಿದ್ದಾರೆ. ಹೀಗಾಗಿ ಸರ್ಕಾರ ನಮ್ಮ ಈ ಮನವಿ ಪರಿಗಣಿಸಿ ಶೀಘ್ರ ಸಾಗುವಳಿ ಚೀಟಿ ನೀಡಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಸಹಕಾರ್ಯದರ್ಶಿ ಹುಸೇನಪ್ಪ, ಕಾರ್ಯದರ್ಶಿಗಳಾದ ಶಿವಣ್ಣ ಸಿಂಗನಾಳ, ಯಲ್ಲಪ್ಪ ಸಿಂಗನಾಳ, ಮಂಜುನಾಥ ಹಟ್ಟಿ, ಮುಖಂಡರಾದ ಕನಕರಾಯ, ಅಮೀನಮ್ಮ, ದುರುಗಮ್ಮ, ಮುದುಕಮ್ಮ ಇತರರಿದ್ದರು.