

ಕಾರಟಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಲಘುವಾಗಿ ಮಾತನಾಡಿರುವ ಅಮಿತ್ ಷಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಪಟ್ಟಣದ ಕನಕದಾಸ ವೃತ್ತದಲ್ಲಿ ಪ್ರಗತಿಪರ ಸಂಘಟನೆ ಒಕ್ಕೂಟದ ತಾಲೂಕು ಸಮಿತಿ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ದೇಶಕ್ಕೆ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಅವರು ನೀಡಿದ ಸಂವಿಧಾನದ ಆಧಾರದ ಮೇಲೆ ಅನೇಕರು ನೆಮ್ಮದಿ ಜೀವನ ನಡೆಸಲು ಅನುಕೂಲವಾಗಿದೆ. ಅವರಿಲ್ಲದಿದ್ದರೆ ಸ್ವಚ್ಛಂದ ಬದುಕು ಕನಸಾಗುತ್ತಿತ್ತು. ಹೀಗಾಗಿ ಮಹಾನ್ ಮಾನವತಾವಾದಿ, ದೀನ ದಲಿತರ ಧ್ವನಿಯಾಗಿರುವ ಅಂಬೇಡ್ಕರ್ ಅವರನ್ನು ನಾವೆಲ್ಲರೂ ಗೌರವಿಸಬೇಕು ಎಂದರು.
ಕೇಂದ್ರ ಸಚಿವ ಅಮಿತ್ ಷಾ ಕೊಡಲೇ ಜನರ ಕ್ಷಮೆ ಕೇಳಬೇಕು. ಸಂವಿಧಾನದ ವಿರುದ್ಧ ಹೇಳಿಕೆ ನೀಡುವ ಮತ್ತು ಬಾಬಾ ಸಾಹೇಬರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಇತರ ಸಂಸದರಿಗೆ ಸಂವಿಧಾನದ ಮಹತ್ವ ತಿಳಿಸಬೇಕು ಎಂದು ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠಗೆ ಮನವಿ ಸಲ್ಲಿಸಿದರು.