ಕರೊನಾ ಕಡಿವಾಣಕ್ಕೆ ಸನ್ನದ್ಧರಾಗಿ: ಆಶಾ ಕಾರ್ಯಕರ್ತೆಯರಿಗೆ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಿರಂಜನ್ ಕರೆ

12-03-rama-health
Published on

ರಾಮನಗರ: ಕರೊನಾ ವೈರಸ್ ಹಾವಳಿ ನಿಯಂತ್ರಣಕ್ಕೆ ಸನ್ನದ್ಧರಾಗಿ ಎಂದು ರಾಮನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಿರಂಜನ್ ಆಶಾ ಕಾರ್ಯಕರ್ತೆಯರಿಗೆ ಕರೆ ನೀಡಿದರು.

ನಗರದ ಗುರುಭವನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಆರ್‌ಸಿಎಚ್ ಕಚೇರಿ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಬುಧವಾರ ಏರ್ಪಡಿಸಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಕ್ರಮಗಳ ಪುನಶ್ಚೇತನ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಕರೊನಾ ವೈರಸ್ ಮಾರಣಾಂತಿಕವಾಗಿದ್ದು ಇದು ಸಂಪೂರ್ಣವಾಗಿ ವಾಸಿಯಾಗಬಲ್ಲ ಯಾವುದೇ ನಿಖರ ಔಷದಿಗಳಿಲ್ಲದ ಕಾರಣ ಸೋಂಕಿತ ವ್ಯಕ್ತಿಯ ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಬೇಕಿದೆ. ರೋಗ ಬಂದ ನಂತರ ಚಿಕಿತ್ಸೆ ನೀಡುವುದಕ್ಕಿಂತ, ಬರದಂತೆ ತಡೆಗಟ್ಟುವುದು ಏಕೈಕ ಉದ್ದೇಶ ವಾಗಬೇಕಿದೆ ಎಂದರು.

ಕರೊನಾ ವೈರಸ್ ಸೋಂಕಿತ ವ್ಯಕ್ತಿ ಕೆಮ್ಮು, ಸೀನು, ಉಗುಳುವಿಕೆಯಿಂದ ಗಾಳಿಯ ಮೂಲಕ ಹರಡುವ ಸಾಧ್ಯತೆ ಇದ್ದು ನಾಗರೀಕರು, ಕೆಮ್ಮುವಾಗ, ಸೀನುವಾಗ, ಕರವಸ್ತ್ರ ಬಳಸುವುದು, ಸೋಂಕಿತ ವ್ಯಕ್ತಿಯು ಜನನಿಬಿಡ ಪ್ರದೇಶಗಳಿಂದ ದೂರವಿರುವುದು, ಸೂಕ್ತ ವೈದ್ಯರ ಬಳಿ ತಪಾಸಣೆಗೆ ಒಳಪಡುವುದರ ಜತೆಗೆ ಪ್ರತ್ಯೇಕವಾದ ಕೊಠಡಿಯಲ್ಲಿ ಚಿಕಿತ್ಸೆ ಪಡೆಯಲು ಇಲಾಖೆ ಜತೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಆಶಾ ಕಾರ್ಯಕರ್ತೆಯರು ಗ್ರಾಮೀಣ ಜನರಿಗೆ ಕರೊನಾ ಲಕ್ಷಣಗಳ ಬಗ್ಗೆ ವೈಜ್ಞಾನಿಕ ತಿಳಿವಳಿಕೆ ನೀಡಬೇಕು ಎಂದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ಪದ್ಮಾ ಮಾತನಾಡಿ, ದೇಶಕ್ಕೆ ಬಹುದೊಡ್ಡ ಮಾನವ ಸಂಪನ್ಮೂಲವನ್ನೇ ಧಾರೆ ಎರೆಯುವ ಗರ್ಭಿಣಿ ಮತ್ತು ಬಾಣಂತಿಯರ ಆರೈಕೆ ಮಾಡುವ ಗುರುತರ ಜವಾಬ್ದಾರಿ ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರ ಮೇಲಿದೆ. ಆ ನಿಟ್ಟಿನಲ್ಲಿ ಗರ್ಭಿಣಿಯರನ್ನು ದಾಖಲು ಮಾಡುವ ಸಂದರ್ಭದಲ್ಲಿ ಅವರ ಜನ್ಮ ದಿನಾಂಕ ಖಾತರಿಗಾಗಿ ಎಸ್‌ಎಸ್‌ಎಲ್ಸಿ ಅಂಕಪಟ್ಟಿ ಪರಿಶೀಲನೆ ಮಾಡಬೇಕಿದೆ. ದೊಡ್ಡ ಪಿಡುಗಾಗಿರುವ ಬಾಲ್ಯವಿವಾಹ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಿದ್ದು, ಒಂದುವೇಳೆ ವ್ಯತ್ಯಾಸ ಕಂಡುಬಂದರೆ ನಮ್ಮ ಗಮನಕ್ಕೆ ತಂದಲ್ಲಿ ಸಂಬಂಧಪಟ್ಟ ವ್ಯಕ್ತಿ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಇಂತಹ ಕಾರ್ಯಗಳಿಂದ ದೇಶದ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಮೂಲಕ ಸದೃಢ ಮಕ್ಕಳನ್ನು ನೀಡಬಹುದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು. ಡಾ. ಮಂಜುನಾಥ, ಡಾ. ಕುಮಾರ್, ಪ್ರಭಾರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್ ಮತ್ತಿತರರು ಇದ್ದರು.

ಗರ್ಭಿಣಿ ಮತ್ತು ಬಾಣಂತಿಯರಿಗೆ ಸಿಗಬಹುದಾದ ಸರ್ಕಾರಿ ಸೌಲಭ್ಯಗಳನ್ನು, ಮಕ್ಕಳಿಗೆ ಕಾಲಕಾಲಕ್ಕೆ ನಿಗದಿಪಡಿಸಿದ ಲಸಿಕೆಗಳನ್ನು ನೀಡುವುದರ ಮೂಲಕ ರೋಗಮುಕ್ತ ಶಿಶುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ದೇವರ ಕೆಲಸವನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪ್ರಾಮಾಣಿಕವಾಗಿ ನಿರ್ವಹಿಸಬೇಕು -ಡಾ. ಪದ್ಮಾ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net