ಮೇಟಿ ಚಿಗುರಿತು, ಕೂಸಿಗೆ ಖುಷಿ ಬಂದಿತಲೇ ಪರಾಕ್ !

Karnika
Published on

ಶಿಗ್ಗಾಂವಿ: ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ರಾಮನವಮಿಯಂದು ಶ್ರೀ ಮೈಲಾರ ಲಿಂಗೇಶ್ವರ ಹಾಗೂ ಶ್ರೀವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

ಬುಧವಾರ ಬೆಳಗ್ಗೆ ದೋಣಿ ತುಂಬಿಸುವ ಕಾರ್ಯಕ್ರಮ ಬಳಿಕ ದೇವರುಗಳ ಉತ್ಸವ ಮೂರ್ತಿ ಮೆರವಣಿಗೆ, ಪಲ್ಲಕ್ಕಿ ಉತ್ಸವ ಜರುಗಿತು. ಮಧ್ಯಾಹ್ನ ಜರುಗಿದ ಕಾರ್ಣಿಕದಲ್ಲಿ ಗ್ರಾಮದ ಗೊರವಯ್ಯ ನೀಲಪ್ಪ ಮಾಕಪ್ಪನವರ ಅವರು, ‘ಮೇಟಿ ಚಿಗುರಿತು, ಕೂಸಿಗೆ ಖುಷಿ ಬಂದಿತಲೇ ಪರಾಕ್’ ಎಂದು ನುಡಿದು ಗಮನ ಸೆಳೆದರು.

ಮಾ. 24ರಿಂದ ಏ. 14ರವರೆಗೆ ಪ್ರತಿ ಭಾನುವಾರ ಮೈಲಾರಲಿಂಗನಿಗೆ ವಿಶೇಷ ಪೂಜೆ, ಅಭಿಷೇಕ, ಡೋಣಿ ತುಂಬಿಸುವ ಕಾರ್ಯಕ್ರಮ, ಜಾಗರಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹೆಗ್ಗಪ್ಪ ದೇವರು ಮತ್ತು ತುಪ್ಪದ ಮಾಳಮ್ಮ ನೂತನ ದೇವರ ಮೂರ್ತಿಯ ಮೆರವಣಿಗೆ ಕುಂಭ ಮೇಳ ಹಾಗೂ ಸಕಲ ವಾದ್ಯ ವೈಭವದೊಂದಿಗೆ ನಡೆಯಿತು. ಸೋಮವಾರ ನೂತನ ದೇವರುಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಮಂಗಳವಾರ ಜಾಗರಣೆ ಕಾರ್ಯಕ್ರಮಗಳು, ಗೊರವಪ್ಪ, ಗೊರವಮ್ಮನವರಿಂದ ಮೈಲಾರಲಿಂಗೇಶ್ವರನ ಆರಾಧನೆ ನಡೆಯಿತು.

ಗ್ರಾಮದ ಹಿರಿಯರಾದ ವೀರಭದ್ರಗೌಡ ಪಾಟೀಲ, ಧರ್ಮಣ್ಣ ಕಿವಡನವರ, ಶಿವಪ್ಪ ಈಟಿ, ಶರೀಫ ಮಾಕಪ್ಪನವರ, ಮುದಕಪ್ಪ ಸುಣಗಾರ, ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಅಗಸರ, ಹನಮಂತಪ್ಪ ಸುಣಗಾರ, ವೀರಭದ್ರಯ್ಯ ಪೂಜಾರ ಹಾಗೂ ದೇವಸ್ಥಾನ ಸಮೀತಿಯ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net