ರಾಜ್ಯದ 8 ನಕ್ಸಲರು ಈಗಲೂ ಸಕ್ರಿಯ, ಕೇರಳದಲ್ಲಿರುವ ಶಂಕೆ

NAXAL NW
Published on

| ಆರ್.ಬಿ.ಜಗದೀಶ್ ಕಾರ್ಕಳ
ಸರ್ಕಾರ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನಾ ಪತ್ರದಲ್ಲಿ 22 ಜನರ ಭಾವಚಿತ್ರವಿತ್ತು. ಅವರಲ್ಲಿ ಕೆಲವರು ಎನ್‌ಕೌಂಟರ್‌ಗೆ ಬಲಿಯಾದರೆ, ಇನ್ನೂ ಕೆಲವರು ಶರಣಾಗತಿಯಾಗಿದ್ದಾರೆ. ಈ ಸಂಖ್ಯೆ 12. ಉಳಿದ 10 ಮಂದಿಯಲ್ಲಿ ಎಂಟು ಮಂದಿ ಇನ್ನೂ ಸಕ್ರಿಯರಾಗಿದ್ದಾರೆ.
ನಕ್ಸಲ್ ನಾಯಕನಾಗಿದ್ದ ಬಿ.ಜಿ.ಕೃಷ್ಣಮೂರ್ತಿ, ಕಬಿನಿ ದಳದ ಕಮಾಂಡರ್ ಸಾವಿತ್ರಿ ಬಂಧನ ಹಾಗೂ ಹೊಸಗದ್ದೆ ಪ್ರಭಾ ಶರಣಾಗತಿ ಬಳಿಕ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಬಹುತೇಕ ನಿಂತೇ ಹೋಯಿತು ಎಂದು ಹೇಳಲಾಗುತ್ತಿರುವ ನಡುವೆಯೇ ಹಲವು ನಕ್ಸಲರು ಇನ್ನೂ ಪತ್ತೆಗೆ ಬಾಕಿ ಇರುವ ಮಾಹಿತಿ ಲಭಿಸಿದೆ. ನಕ್ಸಲ್ ಚಟುವಟಿಕೆಗಳು ರಾಜ್ಯದಲ್ಲಿ ಕ್ಷೀಣಿಸಿದೆಯಾದರೂ, ಕರ್ನಾಟಕದ ಗಡಿಭಾಗದಲ್ಲಿರುವ ಕೇರಳ ಮತ್ತು ತಮಿಳುನಾಡಿನ ಪ್ರದೇಶಗಳಲ್ಲಿ ಇವರು ಸಕ್ರಿಯರಾಗಿದ್ದಾರೆ.
ಇವರಲ್ಲಿ ಪ್ರಮುಖ ಹೆಸರು ಉಡುಪಿ ಜಿಲ್ಲೆ ಹೆಬ್ರಿಯ ಕೂಡ್ಲು ನಾಡ್ಪಾಲು ಗ್ರಾಮದ ವಿಕ್ರಮ್ ಗೌಡ ಆಲಿಯಾಸ್ ಶ್ರೀಕಾಂತ್. ಈತ ಕೇರಳದ ವಯನಾಡ್- ಕೋಯಿಕ್ಕೋಡ್‌ನಲ್ಲಿ ಚಟುವಟಿಕೆ ನಡೆಸುತ್ತಿರುವ ಕಬಿನಿ ದಳದ ಮುಖ್ಯಸ್ಥ. ಈತನ ಪತ್ನಿ ಸಾವಿತ್ರಿಯೇ ಈಗ ಪೊಲೀಸರ ವಶದಲ್ಲಿರುವುದು. ವಿಕ್ರಮ್ ಗೌಡನ ಸುಳಿವಿಗೆ ಕರ್ನಾಟಕ ಸರ್ಕಾರ 5 ಲಕ್ಷ ರೂ. ಬಹುಮಾನ ಘೋಷಿಸಿದೆ.
ಉಳಿದಂತೆ ಚಿಕ್ಕಮಗಳೂರಿನ ಮೂಡಿಗೆರೆ ಅಂಗಡಿ ಗ್ರಾಮದ ನಿವಾಸಿ ಎ.ಎಸ್.ಸುರೇಶ ಅಲಿಯಾಸ್ ಮಹೇಶ್ ಅಲಿಯಾಸ್ ಪ್ರದೀಪ ಅಲಿಯಾಸ್ ತುಂಗಪ್ಪ ಅಲಿಯಾಸ್ ಮಹದೇವ, ಚಿಕ್ಕಮಗಳೂರು ಬುಕ್ಕಡಿಬೈಲು ಮುಂಡಗಾರಿನ ಲತಾ ಆಲಿಯಾಸ್ ಲೋಕಮ್ಮ ಆಲಿಯಾಸ್ ಶ್ಯಾಮಲಾ ಇನ್ನೂ ಪತ್ತೆಯಾಗಿಲ್ಲ. ಇವರ ಸುಳಿವಿಗೂ 5 ಲಕ್ಷ ರೂ. ಬಹುಮಾನ ಪ್ರಕಟಿಸಲಾಗಿದೆ.
ಕೊಡಗೆ ಹಿತ್ತಲಮನೆಯ ರವೀಂದ್ರ ಆಲಿಯಾಸ್ ಕೋಟೆಹೊಂಡ ರವಿ, ರಾಯಚೂರು ಜಯಣ್ಣ ಅಲಿಯಾಸ್ ಜಾನ್ ಅಲಿಯಾಸ್ ಮಹೇಶ್, ಚಿಕ್ಕಮಗಳೂರು ಬಾಳೆಹೊಳೆ ಎಂ.ವನಜಾಕ್ಷಿ ಅಲಿಯಾಸ್ ಕಲ್ಪನಾ, ಬೆಳ್ತಂಗಡಿಯ ಕುತ್ಲೂರಿನ ಸುಂದರಿ ಆಲಿಯಾಸ್ ಗೀತಾ ಅಲಿಯಾಸ್ ಸಿಂಧು (2010ರಲ್ಲಿ ಹೆಬ್ರಿ ಎನ್‌ಕೌಂಟರ್‌ನಲ್ಲಿ ಬಲಿಯಾದ ವಸಂತನ ಸಹೋದರಿ) ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಇವರ ಪೈಕಿ ಸುಂದರಿ ಹಾಗೂ ಜಯಣ್ಣ ಪತ್ತೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 10 ಲಕ್ಷ ರೂ. ಬಹುಮಾನ ಘೋಷಿಸಿದೆ. 2014ರಲ್ಲಿ ಕೇರಳದ ವಯನಾಡು ಜಿಲ್ಲೆಯ ವೆಲ್ಲಮುಂಡ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಬೆದರಿಕೆ ಹಾಕಿರುವ ಆರೋಪವಿದೆ.
ಈ ಏಳೂ ಮಂದಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದು ಖಾತ್ರಿ. ಉಳಿದಂತೆ ಛತ್ತೀಸ್‌ಗಢದ ಮನೋಜ್, ಭಾರತಿ ಅಲಿಯಾಸ್ ದೀಪಾ, ಶ್ರೀಮತಿ ಎಂಬ ಮೂವರ ಕುರಿತು ಮಾಹಿತಿ ನೀಡಿದವರಿಗೆ ತಲಾ 1 ಲಕ್ಷ ರೂ. ನೀಡುವುದಾಗಿ ಸರ್ಕಾರ ಹಿಂದೆ ಹೇಳಿತ್ತು. ಇವರಲ್ಲಿ ಒಬ್ಬರ ಸಹಿತ ಒಟ್ಟು 8 ಮಂದಿ ಇನ್ನೂ ಭೂಗತರಾಗಿಯೇ ನಕ್ಸಲ್ ಹೋರಾಟಗಳಲ್ಲಿ ಭಾಗವಹಿಸುತ್ತಿರುವ ಮಾಹಿತಿ ನಕ್ಸಲ್ ನಿಗ್ರಹ ಪಡೆಗಿದೆ.
 ಸಾವಿನ ಸುದ್ದಿನ ನಡುವೆ ಎದ್ದು ಬಂದ ಪ್ರಭಾ: ಪಶ್ಚಿಮಘಟ್ಟದಲ್ಲಿ ಬೇರೂರಿದ್ದ ನಕ್ಸಲ್ ಚಳವಳಿಯಲ್ಲಿ ಆಗುಂಬೆ ಹೊಸಗದ್ದೆಯ ಪ್ರಭಾಳದ್ದು ಪ್ರಮುಖ ಪಾತ್ರವಿತ್ತು. ಈಕೆ ಬಿ.ಜಿ.ಕೃಷ್ಣಮೂರ್ತಿಯ ಪತ್ನಿ. ಪತ್ತೆ ಸಾಧ್ಯವಾಗದ ಪೊಲೀಸರು ಆಕೆ ಸತ್ತು ಹೋಗಿದ್ದಳೆಂದು ಶಂಕಿಸಿದ್ದರು. ಅದು ಬಿ.ಜಿ.ಕೃಷ್ಣಮೂರ್ತಿಯ ಬಂಧನ ಬಳಿಕ ಹುಸಿಯಾಗಿದೆ. ಬೆನ್ನಲ್ಲೇ ಆಕೆ ಡಿ.18ರಂದು ತಮಿಳುನಾಡು ಪೊಲೀಸರಿಗೆ ಶರಣಾಗಿದ್ದಾಳೆ. ಆ ಮೂಲಕ 20 ವರ್ಷಗಳ ಭೂಗತ ತೀವ್ರವಾದಕ್ಕೆ ಇತಿಶ್ರೀ ಹಾಡಿದ್ದಾಳೆ. ಪಾರ್ಶ್ವವಾಯು ಸಹಿತ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಆಕೆ ಪತಿಯ ಬಂಧನ ಬಳಿಕ ದಾರಿ ಕಾಣದೆ ಮುಖ್ಯವಾಹಿನಿಗೆ ಮರಳಿದ್ದಾಳೆ.
ಕೃಷ್ಣಮೂರ್ತಿ ಎಲ್‌ಎಲ್‌ಬಿ ಪದವೀಧರ: ಶೃಂಗೇರಿ ಮೂಲದ ಬಿ.ಜಿ.ಕೃಷ್ಣಮೂರ್ತಿ ಶಿವಮೊಗ್ಗ ಜೆಸಿಬಿಎಂ ಕಾಲೇಜಿನಲ್ಲಿ ಪದವಿ, ಬಳಿಕ ಎಲ್‌ಎಲ್‌ಬಿ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದ. ವಿದ್ಯಾರ್ಥಿ ದಿಸೆಯಲ್ಲಿ ಎಡವಾದಿ ಚಿಂತನೆಗಳಿಂದ ಪ್ರೇರಿತನಾಗಿ 2000 ಇಸವಿ ಆಸುಪಾಸಿನಲ್ಲಿ ನಡೆದಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಚಳವಳಿಯಲ್ಲಿ ಸಕ್ರಿಯನಾಗಿದ್ದ. 2003ರಿಂದ ಭೂಗತನಾಗಿ ನಕ್ಸಲ್ ಚಟುವಟಿಕೆಗಳಿಗೆ ಇಳಿದ. ಪಶ್ಚಿಮಘಟ್ಟ ಚಳವಳಿಯಲ್ಲಿ ವಿಶೇಷ ವಲಯ ಸಮಿತಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ. 2005ರಲ್ಲಿ ಸಾಕೇತ್ ರಾಜನ್ ಹತ್ಯೆ ಬಳಿಕ ನಾಯಕತ್ವ ಕೃಷ್ಣಮೂರ್ತಿ ಹೆಗಲೇರಿತ್ತು. 2018ರಲ್ಲಿ ತಂದೆ ಗೋಪಾಲ ರಾವ್ ನಿಧನರಾದಾಗ ಪೊಲೀಸರು ಸಿದ್ಧರಾಗಿದ್ದರಾದರೂ ಕೃಷ್ಣಮೂರ್ತಿ ಬಂದಿರಲಿಲ್ಲ. ಹೆಚ್ಚಾಗಿ ಮೈಸೂರಿನಲ್ಲೇ ಓಡಾಡಿಕೊಂಡಿದ್ದ ಈತ ಸಾಗುತ್ತಿದ್ದ ಕಾರು ರಾಜ್ಯದ ಗಡಿಭಾಗದ ವಯನಾಡ್‌ನಲ್ಲಿ ನ.9ರಂದು ಕೆಟ್ಟು ನಿಂತಿದ್ದು, ಹಿಂಬಾಲಿಸುತ್ತಿದ್ದ ಕೇರಳ ಎಟಿಎಸ್ ಡ್ರಾಪ್ ಕೊಡುವ ನೆಪದಲ್ಲಿ ಹತ್ತಿಸಿಕೊಂಡು ಸಾವಿತ್ರಿ ಸಹಿತ ಬಂಧಿಸಿತ್ತು.
ಬಂಧನಕ್ಕೊಳಗಾದವರು: ಸೊರಬದ ದೇವೇಂದ್ರ ಆಲಿಯಾಸ್ ವಿಷ್ಣು ಅಲಿಯಾಸ್ ವಿಕ್ರಮ, ಭದ್ರಾವತಿಯ ಆಶಾ, ಚಿಕ್ಕಮಗಳೂರು ಕೊಪ್ಪದ ಸೋಮಲಾಪುರದ ಎನ್.ನಂದಕುಮಾರ್ ಆಲಿಯಾಸ್ ರಂಗಪ್ಪ ಆಲಿಯಾಸ್ ರಂಗನಾಥ, ಮಾವಿನಕೆರೆಯ ಕನ್ಯಾಕುಮಾರಿ ಆಲಿಯಾಸ್ ಕನ್ಯಾ ಅಲಿಯಾಸ್ ಸುವರ್ಣ ಪೊಲೀಸರಿಂದ ವಿವಿಧ ಹಂತಗಳಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಶರಣಾದವರು: ರಾಜ್ಯದಲ್ಲಿ ಎರಡು ದಶಕಗಳ ಹಿಂದೆ ನಕ್ಸಲ್ ಚಳವಳಿಯನ್ನು ತೀವ್ರಗೊಳಿಸಿದವರಲ್ಲಿ ಮೊದಲಿಗ ನೀಲಗುಳಿ ಪದ್ಮನಾಭ. ಆಂಧ್ರದಲ್ಲಿ ತರಬೇತಿ ಪಡೆದು ಇಲ್ಲಿ ಯುವ ಸಮುದಾಯವನ್ನು ಸೆಳೆಯುತ್ತಿದ್ದ. ಚಿಕ್ಕಮಗಳೂರಿನ ಬರ್ಕಣ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಕಾಲಿನ ಶಕ್ತಿ ಕಳೆದುಕೊಂಡಿದ್ದ. 2016ರಲ್ಲಿ ನೀಲಗುಳಿ ಪದ್ಮನಾಭ, ರಾಯಚೂರು ಕುರ್ತುಕುಂದದ ರಿಜ್ವಾನ ಬೇಗಂ, ಪರಶುರಾಮ್, ಭಾರತಿ ಎಂಬ ನಾಲ್ವರು ನಕ್ಸಲರು ಚಿಕ್ಕಮಗಳೂರಿನಲ್ಲಿ ಶರಣಾದರು. 2014ರಲ್ಲಿ ಸಿರಿಮನೆ ನಾಗರಾಜ, ನೂರ್ ಶ್ರೀಧರ್ ಶರಣಾದರು. ಜಯ, ಮಲ್ಲಿಕಾ, ಯಡಗುಂದದ ಕೋಮಲಾ, ಹಾಗಲಗಂಚಿ ವೆಂಕಟೇಶ್ ಕೂಡ ಮುಖ್ಯವಾಹಿನಿಗೆ ಸೇರ್ಪಡೆಗೊಂಡರು. ಮುಖ್ಯವಾಹಿನಿಗೆ ಸೇರಿಸುವಲ್ಲಿ ಗೌರಿ ಲಂಕೇಶ್, ಎಚ್.ಎಸ್.ದೊರೆಸ್ವಾಮಿ, ಎ.ಕೆ.ಸುಬ್ಬಯ್ಯ, ಕೆ.ಪಿ.ಪಾಲ್, ಶಿವಸುಂದರ್, ನಗರಿ ಬಾಬಯ್ಯ ಮತ್ತಿತರರು ಶ್ರಮಿಸಿದ್ದರು.
ಎನ್‌ಕೌಂಟರ್‌ಗಳು: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಯ ಮುಂದಾಳು ಸಾಕೇತ್ ರಾಜನ್ ಚಿಕ್ಕಮಗಳೂರಿನ ಮೆಣಸಿನಹಾಡ್ಯದಲ್ಲಿ 2005ರಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದ. 2003 ನ.17ರಂದು ಕಾರ್ಕಳ ತಾಲೂಕು ಈದು ಬಲ್ಲೊಟ್ಟು ರಾಮಪ್ಪ ಪೂಜಾರಿ ಅವರ ಮನೆ ಬಳಿ ಎನ್‌ಕೌಂಟರ್‌ಗೆ ರಾಯಚೂರಿನ ಹಾಜಿಮಾ, ಕೊಪ್ಪದ ಪಾರ್ವತಿ ಬಲಿಯಾಗಿದ್ದರು. ಮೂಡಿಗೆರೆ ಕಳಸದ ಯಶೋಧಾ ಗುಂಡೇಟು ತಗುಲಿ ಬದುಕಿ ಉಳಿದಿದ್ದು, ನಂತರ ನ್ಯಾಯಾಲಯದಲ್ಲಿ ಖುಲಾಸೆಗೊಂಡಳು. 2010ರಲ್ಲಿ ಹೆಬ್ರಿ ಮುಟ್ಲುಪ್ಪಾಡಿ ಎನ್‌ಕೌಂಟರಿನಲ್ಲಿ ಕುತ್ಲೂರಿನ ವಸಂತ ಬಲಿಯಾಗಿದ್ದ. 2012ರಲ್ಲಿ ಸುಬ್ರಹ್ಮಣ್ಯ ಎನ್‌ಕೌಂಟರ್‌ನಲ್ಲಿ ರಾಯಚೂರಿನ ಎಲ್ಲಪ್ಪ ಮೃತಪಟ್ಟ.

ರಾಜ್ಯದ 15 ಕಡೆಗಳಲ್ಲಿ ನಕ್ಸಲ್ ನಿಗ್ರಹ ದಳದ ಕ್ಯಾಂಪ್‌ಗಳಿದ್ದು, ಅಹೋರಾತ್ರಿ ಕಾರ್ಯಾಚರಣೆ, ಮಾಹಿತಿ ಸಂಗ್ರಹ ಕಾರ್ಯ ಮುಂದುವರಿದಿದೆ. ಪ್ರಸಕ್ತ ಈ ಭಾಗದಲ್ಲಿ ಎಂಟು ನಕ್ಸಲೀಯರು ಸಕ್ರಿಯರಾಗಿದ್ದಾರೆ. ಶರಣಾಗತಿಗೆ ಮೊದಲ ಆದ್ಯತೆ. ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದರೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು. ಆರ್ಥಿಕ ನೆರವು, ವಸತಿ, ಉದ್ಯೋಗ ಪ್ಯಾಕೇಜ್ ಘೋಷಿಸಲಾಗಿದೆ. | ಪ್ರಕಾಶ್ ನಿಕಮ್, ಎಎನ್‌ಎಫ್ ಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net