

ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರನ್ನು 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾಹಿತಿ ನೀಡಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ, ಅಕಾಡೆಮಿಯ 2022-23ನೇ ಸಾಲಿನ ವಿವಿಧ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ನಿಯಮಾನುಸಾರ ಒಬ್ಬರಿಗೆ ಪಾರ್ತಿಸುಬ್ಬ ಪ್ರಶಸ್ತಿ, ಐದು ಜನರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಹಾಗೂ 10 ಜನರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಿಗೆ 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು, ಪೇಟ ಹಾಗೂ ಫಲ-ತಾಂಬೂಲ ನೀಡಿ ಪುರಸ್ಕರಿಸಲಾಗುವುದು ಎಂದರು.
ಭಾಗವತ ದಿನೇಶ್ ಅಮ್ಮಣ್ಣಾಯ, ನಾರಾಯಣಪ್ಪ ಎ.ಆರ್., ಎಂ. ಜಬ್ಬಾರ್ ಸಮೋ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಚೆನ್ನಪ್ಪ ಗೌಡ ಸಜಿಪ ಆಯ್ಕೆಯಾಗಿದ್ದು, ತಲಾ 50 ಸಾವಿರ ರೂ. ನಗದು ಸಹಿತ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ರಘುನಾಥ ಶೆಟ್ಟಿ ಬಾಯಾರು, ದಿವಾಕರ ದಾಸ ಕಾವಳಕಟ್ಟೆ, ಸುಬ್ರಾಯ ಪಾಟಾಳಿ ಸಂಪಾಜೆ, ನರಾಡಿ ಭೋಜರಾಜ ಶೆಟ್ಟಿ, ಸದಾನಂದ ಪ್ರಭು, ಹೊಳೆಮಗೆ ನಾಗಪ್ಪ, ಮರಕಾಲ ಶಿರಳಗಿ ತಿಮಮ್ಪ ಹೆಗಡೆ, ಬಾಬು ಕುಲಾಲ ಹಳ್ಳಾಡಿ, ಶಿವಯ್ಯ, ಜೀವಪ್ಪ ಆಯ್ಕೆಯಾಗಿದ್ದು, ತಲಾ 25 ಸಾವಿರ ರೂ. ನಗದು ಸಹಿತ ಪ್ರಶಸ್ತಿ ಪಡೆಯಲಿದ್ದಾರೆ.
ಅಕಾಡೆಯಿಂದ ನೀಡುವ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿಯ 25 ಸಾವಿರ ರೂ. ನಗದು ಸಹಿತ ಪ್ರಶಸ್ತಿಗೆ ಗೋಪಾಕೃಷ್ಣ ಭಟ್ ಜೋಗಿಮನೆ ಆಯ್ಕೆಯಾಗಿದ್ದಾರೆ.
2022ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ವಿದ್ವಾನ್ ಗಣಪತಿ ಭಟ್, ಡಾ. ಮನೋರಮಾ ಬಿ.ಎನ್. ಹಾಗೂ 2023ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಡಾ. ಸತೀಶ ಜಿ. ನಾಯಕ್, ಎಚ್. ಸುಜಯೀಂದ್ರ ಹಂದೆ ಕೋಟ ಅವರನ್ನು ಆಯ್ಕೆ ಮಾಡಲಾಗಿದ್ದು, 25 ಸಾವಿರ ರೂ. ನಗದು ಸಹಿತವಾಗಿ ಪುರಸ್ಕರಿಸಲಾಗುವುದು ಎಂದು ಡಾ. ತಲ್ಲೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್., ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಆರ್., ಅಕಾಡೆಮಿ ಸದಸ್ಯರಾದ ವಿದ್ಯಾಧರ ಜಳವಳ್ಳಿ, ಸುಧಾಕರ ಶೆಟ್ಟಿ ಉಳ್ಳಾಲ ಇದ್ದರು.
ಪ್ರಶಸ್ತಿ ಪುರಸತರನ್ನು ನವೆಂಬರ್ 2ನೇ ಅಥವಾ 3ನೇ ವಾರದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಪ್ರದಾನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಇಲಾಖಾ ಸಚಿವರು, ಉಸ್ತುವಾರಿ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕಿರುಪರಿಚಯದ ಕೃತಿಯನ್ನು ಅದೇ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾಹಿತಿ ನೀಡಿದರು.