ಮಾಂಬಾಡಿ ಸುಬ್ರಹ್ಮಣ್ಯ ಭಟ್​ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

udp-10-mambadi subrahmanya bhat
Published on

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್​ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿಯು ಒಂದು ಲಕ್ಷ ರೂ. ಬಹುಮಾನ ಮೊತ್ತ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 16ರಂದು ಉಡುಪಿ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನಡೆಸಲಾಗುವುದು ಎಂದರು.

50 ಸಾವಿರ ರೂ. ನಗದು ಒಳಗೊಂಡ ಅಕಾಡೆಮಿಯ ಗೌರವ ಪ್ರಶಸ್ತಿಗೆ ಯಕ್ಷಗಾನ ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡ, ಕೋಡಿ ವಿಶ್ವನಾಥ ಗಾಣಿಗ, ರಾಘವದಾಸ್​, ಸುಬ್ರಾಯ ಹೊಳ್ಳ, ಮೂಡಲಪಾಯ ಯಕ್ಷಗಾನ ಕಲಾವಿದ ಕಾಂತರಾಜು ಅವರನ್ನು ಆಯ್ಕೆ ಮಾಡಲಾಗಿದೆ. 25 ಸಾವಿರ ರೂ. ನಗದು ಒಳಗೊಂಡ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಅಡ್ಕ ಗೋಪಾಲಕೃಷ್ಣ ಭಟ್​, ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ, ಮವ್ವಾರು ಬಾಲಕೃಷ್ಣ ಮಣಿಯಾಣಿ, ಉಮೇಶ್​ ಕುಪ್ಪೆಪದವು, ಶಿವಾನಂದ ಗೀಜಗಾರು, ಮುಗ್ವಾ ಗಣೇಶ್​ ನಾಯ್ಕ, ಸುರೇಂದ್ರ ಮಲ್ಲಿ, ಅಂಡಾಲ ದೇವಿಪ್ರಸಾದ ಶೆಟ್ಟಿ, ಕೃಷ್ಣಪ್ಪ, ಹಳುವಳ್ಳಿ ಜ್ಯೋತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

25 ಸಾವಿರ ರೂ. ನಗದು ಪುರಸ್ಕಾರದೊಂದಿಗೆ ಕರ್ಗಲ್ಲು ವಿಶ್ವೇಶ್ವರ ಭಟ್ಟ ಅವರಿಗೆ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿ ನೀಡಲಾಗುವುದು ಎಂದರು.

ಅಕಾಡೆಮಿ ರಿಜಿಸ್ಟ್ರಾರ್​ ನಮ್ರತಾ ಮತ್ತು ಸದಸ್ಯರಾದ ಸತೀಶ ಅಡಪ ಸಂಕಬೈಲ್​, ಸುಧಾಕರ ಶೆಟ್ಟಿ, ರಾಘವ ಎಚ್​., ಕೃಷ್ಣಪ್ಪ ಪೂಜಾರಿ ಕಿನ್ಯಾ, ದಯಾನಂದ ಪಿ., ಮೋಹನ ಕೊಪ್ಪಲ ಕದ್ರಿ, ಗುರುರಾಜ್​ ಭಟ್​, ರಾಜೇಶ್​ ಕುಳಾಯಿ, ವಿದ್ಯಾಧರ ವೆಂಕಟೇಶ ಮಡಿವಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net