

Karnataka Woman : ಮೈಸೂರಿನ ಭೇರ್ಯ ಗ್ರಾಮದ ಹೋಟೆಲ್‌ವೊಂದರಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದಲ್ಲಿ ಸ್ಫೋಟಕ ಸಂಗತಿ ಬಯಲಾಗಿದೆ. ಪ್ರಿಯಕರನೇ ಆಕೆಯ ಬಾಯಿಯಲ್ಲಿ ಸ್ಫೋಟಕವನ್ನು ಸಿಡಿಸಿ ಕ್ರೂರವಾಗಿ ಕೊಲೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಹುಣಸೂರು ತಾಲೂಕಿನ ಬಿಳಿಕೆರೆ ಸಮೀಪದ ಗೆರಸನಹಳ್ಳಿ ಗ್ರಾಮದ ನಿವಾಸಿ ದರ್ಷಿತಾ (21) ಮೃತರು. ಈಕೆ ಕೇರಳ ಮೂಲದ ಯುವಕನೊಂದಿಗೆ ಮದುವೆಯಾಗಿದ್ದಳು. ಆದರೆ, ದಾಂಪತ್ಯದಲ್ಲಿ ವೈಮನಸ್ಸು ಮೂಡಿ ಗಂಡನಿಂದ ದೂರವಾಗಿ ಬೆಟ್ಟದಪುರದಲ್ಲಿ ವಾಸವಿದ್ದಳು. ಇದೇ ಸಮಯದಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಸಿದ್ದರಾಜು(25) ಎಂಬಾತನ ಜತೆ ವಿವಾಹೇತರ ಸಂಬಂಧ ಬೆಳೆದಿತ್ತು. ಕಳೆದ ಶನಿವಾರ (ಆಗಸ್ಟ್ 23) ದೇವಸ್ಥಾನಕ್ಕೆ ಹೋಗುವುದಾಗಿ ಮೈಸೂರು ರಸ್ತೆಯ ಹೊಸ ಬಸ್ ನಿಲ್ದಾಣದ ಮುಂಭಾಗ ಇರುವ ಎಸ್‌ಜಿಆರ್ ರೆಸಿಡೆನ್ಸಿಗೆ ಮಧ್ಯಾಹ್ನ ಬಂದು ರೂಂ ಬುಕ್ ಮಾಡಿದ್ದರು.
ಇದಾದ ನಂತರ ರೂಂನಿಂದ ಹೊರಬಂದ ಸಿದ್ದರಾಜು ಊಟ ತರಲೆಂದು ಹೊರಗಡೆ ತೆರಳಿದ್ದ. ವಾಪಸ್ ಬಂದು ನೋಡಿದಾಗ ರೂಂ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಹೋಟೆಲ್ ಸಿಬ್ಬಂದಿ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಮುಖ ಛಿದ್ರವಾದ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಕಂಡುಬಂದಿತ್ತು. ರೂಂನಲ್ಲಿ ವಿದ್ಯುತ್ ಶಾಕ್ ತಗುಲಿ ಈ ಘಟನೆ ಸಂಭವಿಸಿರಬಹುದು ಎಂದು ಸಿದ್ದರಾಜು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದ. ಆದರೆ, ತನಿಖೆಯ ಸಮಯದಲ್ಲಿ ಅಸಲಿ ಸಂಗತಿ ಹೊರಬಿದ್ದಿದೆ.
ಲಾಡ್ಜ್‌ನಲ್ಲಿ ತಂಗಿದ್ದಾಗ ದರ್ಷಿತಾ ಮತ್ತು ಸಿದ್ದರಾಜು ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ, ಇಬ್ಬರ ನಡುವೆ ಜೋರು ಜಗಳವಾದಾಗ ತಾಳ್ಮೆ ಕಳೆದುಕೊಂಡ ಸಿದ್ದರಾಜು, ದರ್ಷಿತಾಳ ಬಾಯಿಗೆ ದಹಕಕಾರಿ ವಸ್ತುವನ್ನು ಹಾಕಿ, ಕ್ವಾರಿಗಳಲ್ಲಿ ಜೆಲಾಟಿನ್ ಕಡ್ಡಿಗಳನ್ನು ಸ್ಫೋಟಿಸಲು ಬಳಸುವ ಟ್ರಿಗ್ಗರ್ ಬಳಸಿ ಗುಂಡು ಹಾರಿಸಿದ್ದಾನೆ. ಇದರಿಂದ ದರ್ಷಿತಾ ಭೀಕರವಾಗಿ ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ನಂತರ, ಆರೋಪಿ ಸಿದ್ದರಾಜು ಮತ್ತೊಂದು ಕತೆ ಕಟ್ಟಿದ್ದ. ಅದೇನೆಂದರೆ, ಮೊಬೈಲ್ ಫೋನ್ ಸ್ಫೋಟದಿಂದ ದರ್ಷಿತಾ ಸಾವಿಗೀಡಾಗಿದ್ದಾಳೆ ಎಂದು ಹೇಳಿ ಇತರರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದನು. ಆದರೆ, ಪೊಲೀಸ್ ತನಿಖೆಯಲ್ಲಿ ಎಲ್ಲವು ಬಯಲಾಗಿದೆ. ಸಾಲಿಗ್ರಾಮ ಪೊಲೀಸರು ಸಿದ್ದರಾಜುನನ್ನು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.