

ಹಾಸನ: ಮುಂದಿನ ಮೂರು ಮುಖ್ಯಮಂತ್ರಿಗಳ ಆಡಳಿತಾವಧಿ ನಂತರ ಕರ್ನಾಟಕವೂ ಆಂಧ್ರ-ತೆಲಂಗಾಣದಂತೆ ಒಡೆದು ಹೋಳಾಗುತ್ತದೆ ಎಂದು ಬ್ರಹ್ಮಾಂಡ ಗುರೂಜಿ ಶ್ರೀ ನರೇಂದ್ರಬಾಬು ಶರ್ಮಾ ಭವಿಷ್ಯ ನುಡಿದರು.
ಬೆಳಗಾವಿ ಉತ್ತರ ಕರ್ನಾಟಕದ ಕೇಂದ್ರ ಬಿಂದುವಾದರೆ ಬೆಂಗಳೂರು ದಕ್ಷಿಣದ ರಾಜಧಾನಿಯಾಗಿರುತ್ತದೆ. ವರ್ಷಾಂತ್ಯದಲ್ಲಿ ರಾಜ್ಯದ ಸಿಎಂ ಕೂಡ ಬದಲಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಬಿಜೆಪಿಯವರೇ ಅವರನ್ನು ಆ ಸ್ಥಾನದಲ್ಲಿ ಕೂರಲು ಬಿಡುವುದಿಲ್ಲ. ಅದಕ್ಕಾಗಿ ಒಂದು ತಂಡ ಪಕ್ಷದಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದಲೇ ಅವರು ವೈರಾಗ್ಯದ ಕಡೆಗೆ ಆಸಕ್ತಿ ತೋರುತ್ತಿದ್ದಾರೆ ಎಂದು ಗುರುವಾರ ಹಾಸನಾಂಬೆಯ ದರ್ಶನ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಇಂದಿರಾಗಾಂಧಿ ಹತ್ಯೆಯಂತಹ ಅಪಾಯ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಾದಿದೆ. ಜಾತಕದ ಪ್ರಕಾರ ಅವರು ತಾಯಿ ಅಥವಾ ಹೆಂಡತಿ ಜತೆಗೆ ಇರಬೇಕು. ಮೋದಿ ತಮ್ಮ ಸುತ್ತಲಿನವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು. ಇನ್ನೂ 3 ವರ್ಷ ಪ್ರಪಂಚ ಸಂಕಷ್ಟಗಳ ಸರಮಾಲೆಯಲ್ಲೇ ಇರಬೇಕಿದೆ. ಮೂರನೇ ಮಹಾಯುದ್ಧ ಆಗುವುದು ಶತಸಿದ್ಧ. ಸ್ತ್ರೀಯರು ಜಗತ್ತನ್ನು ಆಳುತ್ತಾರೆ. ಅಮೆರಿಕ, ಲಂಡನ್, ಆಫ್ರಿಕಾ, ಜಪಾನ್, ನೇಪಾಳ ಹಾಗೂ ಸಿಂಗಾಪುರದ ರಾಜಕೀಯ ಕ್ಷೇತ್ರದಲ್ಲಿ ಭಾರತದ ಮಹಿಳೆಯರು ಮಿಂಚುತ್ತಾರೆ ಎಂದರು. ಬೆಂಗಳೂರಿಗೆ ಜಲ ಗಂಡಾಂತರ ಇನ್ನೂ ತಪ್ಪಿಲ್ಲ. ಮುಂದಿನ ಒಂದೂವರೆ ವರ್ಷ ಜಲ ಅವಾಂತರಗಳಿಂದ ಎಚ್ಚರವಾಗಿರಬೇಕು ಎಂದರು.
ವೆಂಕಟರಮಣ ಇರಲ್ಲ: ಹಿಂದುಗಳ ಪಾಲಿನ ಪವಿತ್ರ ಧಾರ್ವಿುಕ ಸ್ಥಳವಾಗಿರುವ ತಿರುಪತಿಯಲ್ಲಿ ವೆಂಕಟರಮಣ ಬದಲಿಗೆ ನರಸಿಂಹ ಅಸ್ತಿತ್ವ ತಾಳುತ್ತಾನೆ. ಲಕ್ಷ್ಮೀ ಹಾಗೂ ವಿಷ್ಣುವಿನ ಸೇರ್ಪಡೆಯಿಂದ ನರಸಿಂಹನ ಅವತಾರ ಕಾಣಬೇಕಾಗುತ್ತದೆ. ಗುಜರಾತ್ನಲ್ಲಿ ನಿರ್ವಿುಸಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೂ ಕಂಟಕ ತಪ್ಪಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.