

ಬೆಂಗಳೂರು: ಮೊದಲೇ ಆರ್ಥಿಕ ಕುಸಿತದಿಂದ ಕಂಗೆಟ್ಟಿದ್ದ ರಾಜ್ಯಕ್ಕೆ ಕರೊನಾ ಮಾರಿ ಮತ್ತಷ್ಟು ನಷ್ಟದ ಆಘಾತ ತಂದಿಟ್ಟಿರುವ ಪರಿಣಾಮ ಕೂಡಲೇ ನೆರವಿಗೆ ಧಾವಿಸುವಂತೆ ಸಿಎಂ ಯಡಿಯೂರಪ್ಪ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ.
ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾಗಿರುವ ಬಾಕಿ ವಿಚಾರವಾಗಿ ಈಗಾಗಲೇ ಪ್ರಧಾನಿ ಭಾಗವಹಿಸಿದ್ದ ತುಮಕೂರು ಸಭೆ, ಬಜೆಟ್, ಸದನ ಸೇರಿ ಹಲವು ಕಡೆ ಸಿಎಂ ಬಹಿರಂಗವಾಗಿ ಪ್ರಸ್ತಾಪಿಸಿದ್ದಾರೆ. ಇದಲ್ಲದೆ, ಆರ್ಥಿಕ ಸ್ಥಿತಿಗತಿ ವಿಚಾರದಲ್ಲಿ ಪ್ರತಿಪಕ್ಷಗಳ ಟೀಕೆ ನಿಜವೆಂದೂ ಒಪ್ಪಿದ್ದಾರೆ. ಈಗ ಕರೊನಾ ಭೀತಿ ಹೆಚ್ಚುತ್ತಿರುವಂತೆ ತೆರಿಗೆ ಸಂಗ್ರಹಣೆ ಮೇಲೆ ಪರಿಣಾಮ ಉಂಟಾಗಿರುವುದರಿಂದ ಪದೇಪದೆ ಕೇಂದ್ರದ ಮೇಲೆ ಒತ್ತಡ ತರಲಾರಂಭಿಸಿದ್ದಾರೆಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಆದರೆ ಕೇಂದ್ರ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ತೆರಿಗೆ ಸಂಗ್ರಹ ಪ್ರಮಾಣ ಶೇ.7.64 ರಿಂದ ಶೇ.7ಕ್ಕೆ ಕುಸಿದಿದೆ. ಎಲ್ಲ ವಲಯಗಳಲ್ಲೂ ಪ್ರಗತಿ ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹೆಚ್ಚುವರಿ ನೆರವಿನ ಜತೆಗೆ ಬಾಕಿ ಕೂಡ ಕೊಡಬೇಕಾಗಿದೆ. ಕರೊನಾದಿಂದಾಗಿ ಸಾರಿಗೆ, ಐಟಿ, ಪ್ರವಾಸೋದ್ಯಮ, ಹೋಟೆಲ್, ಜವಳಿ, ಸಿನಿಮಾ ಸೇರಿ ಬಹುತೇಕ ಉದ್ಯಮಗಳ ವ್ಯಾಪಾರ ವಹಿವಾಟು ಬಂದ್ ಆಗಿದೆ. 15ನೇ ಹಣಕಾಸು ಆಯೋಗದ ಪ್ರಕಾರ ಮುಂದಿನ ವರ್ಷ ರಾಜ್ಯಕ್ಕೆ 11215 ಕೋಟಿ ರೂ. ಕಡಿತವಾಗುತ್ತಿದೆ. ಆದ್ದರಿಂದ ಆತಂಕಕ್ಕೆ ಒಳಗಾಗಿರುವ ಸರ್ಕಾರ ಬಾಕಿ ಹಣಕ್ಕಾಗಿ ಒತ್ತಡ ಹೆಚ್ಚಿಸಲಾರಂಭಿಸಿದೆ.
ಹೆಚ್ಚುವರಿಗೂ ಬೇಡಿಕೆ: ರಾಜ್ಯದ ಹಣಕಾಸು ಸ್ಥಿತಿ ಸುಧಾರಿಸದ ಪರಿಣಾಮ ಹೆಚ್ಚುವರಿಯಾಗಿ 5,000 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಸಿಎಂ ವಿಶೇಷ ಮನವಿ ಮಾಡಿರುವು ದಾಗಿ ಮೂಲಗಳು ಹೇಳಿವೆ.
ಇಲಾಖೆಗಳಿಗೆ ಕಡಿತ: ರಾಜ್ಯದಲ್ಲಿ ಕೈಗಾರಿಕೆ, ನಿರ್ವಣ, ಉತ್ಪಾದನೆ, ಸೇವಾ ವಲಯ ಕುಂಠಿತವಾಗಿವೆ. ರಾಜಸ್ವ 1,77,255 ಕೋಟಿ ರೂ.ಗಳಲ್ಲಿ ಬದ್ಧತಾ ವೆಚ್ಚಗಳಿಗೆ 1,55,191 ಕೋಟಿ ರೂ. ವೆಚ್ಚವಾಗಿ ಅಭಿವೃದ್ಧಿಗೆ 22,084 ಕೋಟಿ ರೂ.ಮಾತ್ರ ಉಳಿಯುತ್ತದೆ. ತೆರಿಗೆ ಸಂಗ್ರಹಣೆ ಸಹ ಶೇ.7.64 ರಿಂದ 7ಕ್ಕೆ ಇಳಿದಿದೆ. ಹೀಗಾಗಿ ಈಗ ಇಲಾಖೆಗಳ ಅನುದಾನ ಇನ್ನಷ್ಟು ತಗ್ಗಿಸಬೇಕಾದ ಸ್ಥಿತಿ ನಿರ್ವಣವಾಗಿದೆ. ಆದ್ದರಿಂದ ಈ ಸಾಲಿನ ಬಜೆಟ್ನಲ್ಲಿ ಮೊದಲೇ ಮಾಡಿದ್ದ ಕಡಿತವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಕೊನೆಯ ಕಂತಿನ ಬಿಡುಗಡೆಯಲ್ಲಿ ಎಷ್ಟೆಷ್ಟು ಕಡಿತ ಮಾಡಬಹುದೆಂದು ಚರ್ಚೆ ನಡೆಸಲಾಗುತ್ತಿದೆ.
ಅನಗತ್ಯ ವೆಚ್ಚ ನಿಯಂತ್ರಣ: ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಮಿತವ್ಯಯ ಸಾಧಿಸಲು ಸರ್ಕಾರ ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಿದೆ.
ರುದ್ರಣ್ಣ ಹರ್ತಿಕೋಟೆ