

ಬೆಳಗಾವಿ: ಕರ್ನಾಟಕ ವಿಶ್ವವಿದ್ಯಾಲಯವನ್ನು ಮಾದರಿಯಾಗಿ ಬೆಳೆಸುವ ಜತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸುವುದಕ್ಕಾಗಿ ಅಡಿಪಾಯ ಹಾಕಿದ್ದ ಡಾ.ಡಿ.ಸಿ.ಪಾವಟೆ ಅವರ ಶ್ರಮ ಅಗಾಧ ಎಂದು ಕಿತ್ತೂರು ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಸೋಮಶೇಖರ ಹಲಸಗಿ ಹೇಳಿದರು.
ನೆಹರು ನಗರದ ಕನ್ನಡ ಭವನದಲ್ಲಿ ಕಸಾಪ ಬೆಳಗಾವಿ ಜಿಲ್ಲಾ ಘಟಕ ಮತ್ತು ಕನ್ನಡಭವನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲೆಯ ‘ಶತಮಾನ ಕಂಡ ಸಾಹಿತಿಗಳು’ ಸರಣಿ ಮಾಲಿಕೆಯ 2ನೇ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಡಿ.ಸಿ.ಪಾವಟೆ ದೇಶ ಕಂಡ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ರಾಯಭಾರಿ ಎಂದು ಬಣ್ಣಿಸಿದರು. ಗೋಕಾಕ ತಾಲೂಕಿನ ಮಮದಾಪುರ ಮೂಲದ ಡಾ.ಪಾವಟೆ ಅವರು ಗಣಿತಶಾಸ್ತ್ರದಲ್ಲಿ ಅಗಾಧ ಜ್ಞಾನ ಹೊಂದಿ ಬ್ರಿಟಿಷರಿಂದಲೂ ಸೈ ಎನಿಸಿಕೊಂಡು ಧಾರವಾಡದ ಕರ್ನಾಟಕ ವಿವಿ ಕುಲಪತಿಗಳಾಗಿ ಒಂದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಕಾರ್ಯನಿರ್ವಹಿಸಿ ವಿವಿಯನ್ನು ಮಾದರಿ ಮಾಡಿದರು. ನಿವೃತ್ತಿ ನಂತರ ಪಂಜಾಬ್ ರಾಜ್ಯಪಾಲರಾಗಿ, ಚಂಡಿಘಡ ವಿವಿ ನಿರ್ಮಿಸಿ ಶೈಕ್ಷಣಿಕ ಕ್ರಾಂತಿ ಮಾಡಿದರು ಎಂದರು.
ಸಾಹಿತಿ ಶಿವಯೋಗಿ ಕುಸುಗಲ್ ಮಾತನಾಡಿ, ಜನಪದ ಕಲೆ ಉಳಿಸಿ, ಬೆಳೆಸುವ ಜತೆಗೆ ಯುವಪೀಳಿಗೆಗೆ ಸಂಸ್ಕಾರ ಕಲಿಸಬೇಕಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ಎಂ.ವೈ.ಮೆಣಸಿನಕಾಯಿ ಮಾತನಾಡಿದರು. ತಾಲೂಕಾಧ್ಯಕ್ಷ ಸುರೇಶ ಹಂಜಿ, ಮಲ್ಲಿಕಾರ್ಜುನ ಕನಶೆಟ್ಟಿ, ಎಸ್. ನಂಜುಂಡಪ್ಪ,
ಸ.ರಾ.ಸುಳಕೂಡೆ, ಬಿ.ಬಿ.ಮಠಪತಿ, ಡಾ.ಕವಿತಾ ಕುಸುಗಲ್, ಡಾ.ಬಿ.ವೈ.ನಾಯಿಕ, ಡಾ.ಸಂಗೀತಾ ಕುಸುಗಲ್, ಜಿ.ಎಸ್.ಹಲಸಗಿ, ಡಾ.ಆನಂದ ರಣಗಟ್ಟಿಮಠ, ಬಿ.ಎಸ್.ದೊಡಭಂಗಿ, ಜಿ.ಎಸ್.ಬೊಂಬ್ರಿ, ರಾಜೇಂದ್ರ ಪಾವಟೆ ಇದ್ದರು.