ಕರ್ನಾಟಕ ವಿಶ್ವವಿದ್ಯಾಲಯ ಚಾಂಪಿಯನ್

falapushpa
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನದಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯವು ಜನರಲ್ ಚಾಂಪಿಯನ್ ಪಟ್ಟ ಪಡೆಯಿತು. ಹು-ಧಾ ಮಹಾನಗರ ಪಾಲಿಕೆಯು ರನ್ನರ್ ಅಪ್‌ಗೆ ತೃಪ್ತಿ ಪಟ್ಟಿತು. ಉದ್ಯಾನಗಳ ಸ್ಪರ್ಧೆಯಲ್ಲಿ ಹು-ಧಾ ಮಹಾನಗರ ಪಾಲಿಕೆಯು ಜನರಲ್ ಚಾಂಪಿಯನ್ ಆದರೆ, ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯವು ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಇಲ್ಲಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಮೂರು ದಿನಗಳವರೆಗೆ ಆಯೋಜಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ, ಉದ್ಯಾನ ಸ್ಪರ್ಧೆ ಹಾಗೂ ಸಿರಿ ಧಾನ್ಯ ಹಬ್ಬದ ಸಮಾರೋಪದಲ್ಲಿ ವಿವಿಧ ವಿಭಾಗದಲ್ಲಿ ಬಹುಮಾನ ವಿತರಿಸಲಾಯಿತು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಡಾ.ವಿ.ಎಸ್. ಪಾಟೀಲ ಮಾತನಾಡಿ, ಮರಗಳು ನಮ್ಮ ಶ್ವಾಸಕೋಶ ಇದ್ದಂತೆ. ಎಲ್ಲರೂ ಗಿಡಗಳನ್ನು ನೆಡಬೇಕು. ಇದರ ಜತೆಗೆ ಉದ್ಯಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಇರುವ ಮಾರ್ಗ ಇದೊಂದೆ. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಿದೆ. ಅಲ್ಲಿನ ಶಾಲಾ-ಕಾಲೇಜ್‌ಗಳಿಗೆ ರಜೆ ಘೋಷಿಸಲಾಗುತ್ತಿದೆ. ಮನೆಯಲ್ಲಿಯೇ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿ ನಮ್ಮ ಕಡೆ ಬರಬಾರದು. ನಗರೀಕರಣ, ಕೈಗಾರಿಕಾಕರಣ, ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಜಾಗ ಸಿಗುತ್ತಿಲ್ಲ. ಇದರ ಮಧ್ಯೆ ಬಾಲ್ಕನಿ, ಮೇಲ್ಚಾವಣಿ, ಒಳಾಂಗಣ ಉದ್ಯಾನ ಮಾಡಲು ನಮಗೆ ಅವಕಾಶ ಇದೆ ಎಂದು ವಿವರಿಸಿದರು.

ಸಿರಿಧಾನ್ಯ ಬೆಳೆಯಬೇಕು. ಇದನ್ನೇ ನಾವು ಸೇವಿಸಬೇಕು. ಇದರಿಂದ ನಮ್ಮ ದೇಹಕ್ಕೆ ಜೀವಸತ್ವ, ಖನಿಜ ಸಿಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ನಮ್ಮದೇ ಆದ ಸಂಸ್ಕೃತಿಯನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ತೋಟಗಾರಿಕಾ ಇಲಾಖೆ ನಿವೃತ್ತ ನಿರ್ದೇಶಕ ಸಿ.ಕೆ. ಹೆರಕಲ್ ಮಾತನಾಡಿ, ದೇವರು ನಮಗೆ ಪ್ರಕೃತಿ ಕೊಟ್ಟಿದ್ದಾನೆ. ಅದನ್ನು ಉಳಿಸಬೇಕು. ಗಿಡಗಳನ್ನು ನೆಡುವುದು, ಬೆಳೆಸುವುದು ದೇವರ ಕೆಲಸ ಎಂದು ಭಾವಿಸಬೇಕು. ರಾಷ್ಟ್ರಸೇವೆ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಮೂರು ದಿನಗಳ ನಡೆದ ಫಲಪುಷ್ಪ ಪ್ರದರ್ಶನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ವಿವಿಧ ವಿಭಾಗದಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.

ಪಿ.ಸಿ. ಜಾಬಿನ್ ಕಾಲೇಜ್‌ನ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಡಿ. ಹುದ್ದಾರ, ಮಹಾನಗರ ಪಾಲಿಕೆ ಇಇ ಮಹ್ಮದ್ ಫಿರೋಜ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮಹಾನಗರ ಪಾಲಿಕೆ ತೋಟಗಾರಿಕಾ ವಿಭಾಗದ ನಿವೃತ್ತ ಅಧಿಕಾರಿ ಎ.ಜಿ. ದೇಶಪಾಂಡೆ, ಕೆವಿಜಿ ಬ್ಯಾಂಕ್ ಜಿಎಂ ದಿಲೀಪಕುಮಾರ, ಮುಖ್ಯ ವ್ಯವಸ್ಥಾಪಕ ಉಲ್ಲಾಸ ಗುನಗಾ, ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಮಾಜಿ ನಿರ್ದೇಶಕ ಡಾ.ಕೆ.ಎಫ್. ಕಮ್ಮಾರ ಇತರರು ಇದ್ದರು.

ತೋಟಗಾರಿಕಾ ಇಲಾಖೆ ಹಿರಿಯ ನಿರ್ದೇಶಕ ಯೋಗೇಶ ಕಿಲಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net