ಕೊಡಗಿಗೆ ತುಳು ಅಕಾಡೆಮಿ ಸವಲತ್ತು ತಂದ ರವಿ

13mdka8
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಕೊಡಗಿನಿಂದ ಸದಸ್ಯರಾಗಿ ಆಯ್ಕೆಯಾದ ಮೊಟ್ಟಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಪಿ.ಎಂ. ರವಿ ಭಾಜನರಾಗಿದ್ದಾರೆ. ತನಗೆ ಸಿಕ್ಕ ೨ ವರ್ಷ ೨ ತಿಂಗಳ ಅವಧಿಯಲ್ಲಿ ತುಳು ಅಕಾಡೆಮಿ ಮೂಲಕ ಕೊಡಗಿನಲ್ಲಿ ಸಾಕಷ್ಟು ಅರ್ಥಪೂರ್ಣ ಕೆಲಸ ಮಾಡುವುದರ ಮೂಳಕ ಮೂಲಕ ಗಮನ ಸೆಳೆದಿದ್ದಾರೆ. ಕೊಡಗಿನಲ್ಲಿ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ.

ತುಳು ಭಾಷೆಯಲ್ಲಿ ಒಗಟು ಸ್ಪರ್ಧೆ, ಗಾದೆ ಸ್ಪರ್ಧೆ, ತುಳು ಕವಿತೆ ಸ್ಪರ್ಧೆ ಆಯೋಜಿಸಲಾಗಿತ್ತು. ತುಳು ಭಾಷಿಕ ಸಮುದಾಯದ ೧೩ ಅಧ್ಯಕ್ಷ ರಿಗೆ ಮತ್ತು ಪ್ರಮುಖರಿಗೆ ತುಳು ಲಿಪಿಯ ನಾಮಫಲಕ ವಿತರಣೆ ಮಾಡಲಾಗಿದೆ. ಮೊಗೇರ ಜನಾಂಗದ ಸಂಸ್ಕೃತಿಯ ಭಾಗವಾಗಿರುವ ಮೊಗೇರರ ದುಡಿ ಕುಣಿತ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಆ ಮೂಲಕ ಮೊಗೇರ ಜನಾಂಗದ ಪದ್ಧತಿ ಬಗ್ಗೆ ಯುವಜನರಿಗೆ ಅರಿವು ಮೂಡಿಸಲಾಯಿತು.

೧,೨೦೦ ವರ್ಷದ ಇತಿಹಾಸವಿರುವ ತುಳು ಲಿಪಿಯನ್ನು ಕೊಡಗು ಜಿಲ್ಲೆಯ ತುಳು ಭಾಷಿಕರಿಗೆ ಪರಿಚಯಿಸುವ ಮತ್ತು ಕಲಿಸುವ ನಿಟ್ಟಿನಲ್ಲಿ ಬಲೆ ತುಳು ಲಿಪಿ ಕಲ್ಪುಗ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತುಳು ಲಿಪಿ ಕಲಿಸುವ ಶಿಕ್ಷಕರೊಂದಿಗೆ ಆನ್‌ಲೈನ್‌ನಲ್ಲಿ ಇಂದಿಗೂ ಲಿಪಿ ಕಲಿಸುವ ಪ್ರಕ್ರಿಯೆ ಮುಂದುವರಿದಿದೆ. ಹೆಚ್ಚಿನ ಜನ ತುಳು ಲಿಪಿ ಕಲಿಯುತ್ತಿರುವುದು ವಿಶೇಷ.

ಕೊಡಗಿನಲ್ಲಿರುವ ತುಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ತುಳು ಲಿಪಿ ಕಲಿಯಬೇಕೆಂಬ ನಿಟ್ಟಿನಲ್ಲಿ ತುಳು ಲಿಪಿಯ ಬಗ್ಗೆ ಮನೆ ಮನೆಗೆ ತುಳು ಲಿಪಿ ಎಂಬ ಅಕ್ಷರ ಮಾಲೆಯ ತುಳು ಲಿಪಿ ಚಾರ್ಟ್ ವಿತರಣೆ ಮಾಡಲಾಗಿದೆ. ತುಳು ಸಾಹಿತ್ಯ ಅಕಾಡೆಮಿ ಹೊರ ತರುತ್ತಿರುವ ಮದಿಪು ತ್ರೈಮಾಸಿಕದಲ್ಲಿ ಕೊಡಗಿನ ಬರಹಗಾರರಿಗೆ ಮುಕ್ತ ಅವಕಾಶ ಕಲ್ಪಿಸಕೊಡಲಾಗಿದೆ.

ತುಳು ಕೂಟದ ಪ್ರಮುಖರೊಂದಿಗೆ ಅಕಾಡೆಮಿ ಅಧ್ಯಕ್ಷರೊಂದಿಗೆ ೨ ಸಭೆ ಆಯೋಜಿಸಲಾಗಿತ್ತು. ಕೊಡಗು ಜಿಲ್ಲೆಯ ಸಾಂಸ್ಕೃತಿಕ ಮತ್ತು ಇನ್ನಿತರ ಕಾರ್ಯಕ್ರಮ ಕುರಿತು ಮಹತ್ವದ ಚರ್ಚೆ ನಡೆಯಿತು. ಕಲಾವಿದರಿಗೆ ಕೋವಿಡ್ ಸಂದರ್ಭ ಸರ್ಕಾರ ಘೋಷಿಸಿದ ನೆರವಿನ ಬಗ್ಗೆ ಅರಿವು ಮೂಡಿಸುವುದರೊಂದಿಗೆ ತುಳು ಭಾಷಿಕ ಕಲಾವಿದರ ಪಟ್ಟಿಯನ್ನು ಅಕಾಡೆಮಿ ಮೂಲಕ ಸರ್ಕಾರಕ್ಕೆ ತಲುಪಿಸಲಾಗಿತ್ತು. ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ತುಳು ಚಲನಚಿತ್ರ ಪ್ರದರ್ಶನ ಮಾಡಲಾಗಿತ್ತು.

ಜಿಲ್ಲೆಯಲ್ಲಿ ತುಳು ಭಾಷಿಕರು ೧.೫೦ ಲಕ್ಷಕ್ಕೂ ಮೇಲ್ಪಟ್ಟು ಇದ್ದಾರೆ. ಅನೇಕ ಸಾಹಿತಿಗಳು, ಕಲಾವಿದರು, ಬರಹಗಾರರು ಇದ್ದಾರೆ. ತುಳು ಅಕಾಡೆಮಿ ಇದುವರೆಗೆ ಹೊರ ತಂದಿರುವ ಸಾವಿರಕ್ಕೂ ಹೆಚ್ಚು ವಿವಿಧ ಪಸ್ತುಕಗಳು ಅಕಾಡೆಮಿಯಲ್ಲಿದೆ. ಮಡಿಕೇರಿಯಲ್ಲಿ ಗ್ರಂಥಾಲಯ ಮಾಡುವ ಮೂಲಕ ಕೊಡಗಿನ ತುಳು ಭಾಷಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಗ್ರಂಥಾಲಯ ಸ್ಥಾಪಿಸಬೇಕಾಗಿದೆ. ಈ ಬಗ್ಗೆ ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಪಿ.ಎಂ. ರವಿ.

**
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಕಳೆದ ಎರಡು ವರ್ಷದಲ್ಲಿ ತುಳು ಭಾಷೆಯ ಬೆಳವಣಿಗೆಗೆ ಜಿಲ್ಲೆಯ ತುಳು ಕೂಟದ ಸಹಕಾರದೊಂದಿಗೆ ಶಕ್ತಿ ಮೀರಿ ಕೆಲಸ ಮಾಡಿದ ತೃಪ್ತಿ ಇದೆ. ಪಿ.ಎಂ. ರವಿ, ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net