

ಬೆಂಗಳೂರು: ಕರ್ನಾಟಕ ಕೇವಲ ಭಾರತದ ಐಟಿ, ಬಿಟಿ, ಕೌಶಲದ ರಾಜಧಾನಿ ಮಾತ್ರವಲ್ಲ. ಬದಲಿಗೆ ಜಾಗತಿಕ ಸೃಜನಶೀಲ ರಾಜಧಾನಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದೇವೆ ಎಂದು ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಐಟಿ ಬಿಟಿ ಇಲಾಖೆ ಮತ್ತು ಎಬಿಎಐ ಸಹಭಾಗಿತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮೂರು ದಿನಗಳ ಬೆಂಗಳೂರು ಜಿಎಎಫ್‌ಎಕ್ಸ್ 2025 ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಎವಿಜಿಸಿ, ಎಕ್ಸ್‌ಆರ್ ಕ್ಷೇತ್ರವು ಕೇವಲ ಮನರಂಜನೆಯಾಗಿ ಉಳಿದಿಲ್ಲ. ಬೃಹತ್ ಆರ್ಥಿಕ ಶಕ್ತಿಯಾಗಿ ಮಾರ್ಪಾಡಾಗಿದೆ. ಉದ್ಯೋಗ ಸೃಷ್ಟಿ ಮಾಡುವ ಉದ್ಯಮವಾಗಿದೆ. ನಮ್ಮ ಪ್ರತಿಭೆ ಜಾಗತಿಕ ವೇದಿಕೆಯಲ್ಲಿ ಸ್ಪರ್ಧೆ ನೀಡುವಲ್ಲಿ ಪ್ರಭಲವಾಗಿದ್ದು, ಕರ್ನಾಟಕದ ವಿವಿಧ ಉಪಕ್ರಮಗಳ ಮೂಲಕ ಕೌಶಲಾಭಿವೃದ್ಧಿಯನ್ನು ಹೊಂದಿ ಅನಿಮೇಷನ್, ಗೇಮಿಂಗ್, ವಿಎಫ್‌ಎಕ್ಸ್ ಮತ್ತು ಎಕ್ಸ್‌ಆರ್‌ನಲ್ಲಿ ಕರ್ನಾಟಕವನ್ನು ಉನ್ನತ ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರ.
ಸಭೆಯಲ್ಲಿ ಇಸ್ಪೋರ್ಟ್ಸ್ ಶೃಂಗಸಭೆ ಮತ್ತು ಗೇಮ್ ಡೆವಲಪರ್‌ಗಳ ಸಮ್ಮೇಳನಗಳಿಗೆ ಆತಿಥ್ಯ ವಹಿಸಲು ನಿರ್ಧರಿಸಲಾಯಿತು. ನಾವೀನ್ಯತೆ ವೃದ್ಧಿ, ಪ್ರತಿಭೆಗಳ ಪೋಷಣೆ, ಇ-ಸ್ಪೋರ್ಟ್ಸ್ ಮತ್ತು ಗೇಮ್ ಅಭಿವೃದ್ಧಿಯ ಬೆಳವಣಿಗೆಗೆ ಇದು ಪೂರಕವಾಗಲಿದೆ.
ಶೃಂಗಸಭೆಯಲ್ಲಿ ಜಿಎಎಫ್‌ಎಕ್ಸ್ ಮುಖ್ಯಸ್ಥ ಬಿರೇನ್ ಘೋಷ್, ಸಿನಿತಾರೆ ರಾಣಾ ದಗ್ಗುಬಾಟಿ, ಬಿ.ಎಸ್.ಶ್ರೀನಿವಾಸ್, ವಿವೇಕ್‌ರೆಡ್ಡಿ, ಪ್ರಿನ್ಸ್ ಥಾಮಸ್, ರಜತ್ ದಿವೇಟ್, ಐಎಎಸ್ ಅಧಿಕಾರಿ ಏಕರೂಪ ಕೌರ್ ಮತ್ತಿತರರಿದ್ದರು.