

ವಿಜಯಪುರ: ಡಾ. ರಾಜಕುಮಾರ್ ಅವರು ಕರ್ನಾಟಕ ಕಂಡ ಮೇರು ವ್ಯಕ್ತಿತ್ವದ ಮಹಾನ್ ನಟರು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಜಿಲ್ಲಾಡಳಿತ, ಜಿ.ಪಂ. ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ. ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕುಮಾರ್ ಅವರು ನಮ್ಮ ನಾಡಿನ ಸಂಸತಿ, ಪರಂಪರೆ ಹಾಗೂ ಮಾನವೀಯ ಮೌಲ್ಯ ಸಾರುವ ಸಾಮಾಜಿಕ ಚಲನಚಿತ್ರಗಳಲ್ಲಿ ನಟಿಸುವ ಜತೆಗೆ ತಮ್ಮ ಅಭಿನಯ ಮತ್ತು ವ್ಯಕ್ತಿತ್ವದಿಂದ ನಾಡಿನ ಜನರ ಮನಗಳಲ್ಲಿ ಮನೆ ಮಾಡಿದ್ದರು. ಅವರು ಓರ್ವ ನಟರಾಗಿ ಅಷ್ಟೇ ಅಲ್ಲದೆ, ಗಾಯಕರಾಗಿಯೂ ಹೆಸರು ಮಾಡಿದ್ದರು. ಕನ್ನಡ ನಾಡು&ನುಡಿ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ರಾಜಕುಮಾರ್ ಅಭಿನಯಿಸಿದ ಹಲವು ಆಧ್ಯಾತ್ಮಿಕ, ಪೌರಾಣಿಕ ಪಾತ್ರಗಳಲ್ಲಿನ ಅವರ ಮನೋ ಅಭಿನಯ ಜನರ ಪ್ರೀತಿಗೆ ಪಾತ್ರರಾಗಿದ್ದವು. ಅವರು ಅಭಿನಯಿಸಿದ ಹಲವು ಪಾತ್ರಗಳು ಜನರ ಮೇಲೆ ಗಾಢ ಪರಿಣಾಮ ಬೀರಿವೆ. ಸಾಮಾಜಿಕ ಸಂದೇಶವುಳ್ಳ ಚಲನಚಿತ್ರಗಳು ಶ್ರಮದ ಬದುಕು, ಸ್ವಾಭಿಮಾನದ ಬದುಕಿಗೆ ಅವರ ಚಲನಚಿತ್ರಗಳು ಇಂದಿಗೂ ಪ್ರೇರಣೆಯಾಗಿವೆ ಎಂದು ಹೇಳಿದರು.
ಸರಳತೆ ಅಭಿನಯದ ಮೂಲಕ ಸಮಾಜದ ಎಲ್ಲರ ಮನ ಗೆದ್ದಿರುವ ರಾಜಕುಮಾರ್ ಅವರ ಜನ್ಮ ದಿನಾಚರಣೆ ಸರ್ಕಾರದ ವತಿಯಿಂದ ಆಚರಿಸುತ್ತಿದ್ದು, ಕನ್ನಡಿಗರಿಗೆ ಹೆಮ್ಮೆಯ ಕ್ಷಣ. ಅವರು ನಟಿಸಿದ ಚಲನಚಿತ್ರಗಳು ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವುದರಲ್ಲಿ ಯಶಸ್ವಿಯಾಗಿವೆ ಎಂದರು.
ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ ಮಾತನಾಡಿ, ಅಭಿನಯ ಕಲಾಶ್ರೀ, ಅಭಿನಯ ಸವ್ಯಸಾಚಿ, ಕನ್ನಡದ ಕಂದ ಸೇರಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಮೇರು ನಟ ಡಾ. ರಾಜಕುಮಾರ್ ಅವರು ದಾದಾಸಾಹೇಬ ಫಾಲ್ಕೆ, ಪದ್ಮಭೂಷಣ ಅನೇಕ ಪ್ರಶಸ್ತಿಗಳಿಂದ ಸನ್ಮಾನಿತರಾಗಿದ್ದಾರೆ. ರಾಜಕುಮಾರ್ ಅವರು ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ ಎಂದರು.
ಬಳಿಕ ಡಾ. ರಾಜಕುಮಾರ್ ಚಲನಚಿತ್ರಗಳ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಗಾಯಕರಾದ ವಿರೇಶ ವಾಲಿ, ಈಶ್ವರ ಉಮರಾಣಿ, ಸಾಗರ ಬಾಗಲಕೋಟೆ, ಕಿರಣ ಪೂಜಾರಿ ಹಲವು ಹಾಡುಗಳನ್ನು ಹಾಡಿ ಪೇಕ್ಷಕರನ್ನು ರಂಜಿಸಿದರು.
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಅವರು ರಾಜಕುಮಾರ್ ಚಿತ್ರದ ಹಾಡು ಹಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿ.ಪಂ. ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕೆಎಂಎಫ್ನ ಅರವಿಂದ ಕನ್ನೂರ, ತೋಟಗಾರಿಕೆ ಇಲಾಖೆ ಅಧಿಕಾರಿ ಭಗವಂತ ಜಿಗಜಿಣಗಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಶರಣು ಸಬರದ, ವಿದ್ಯಾವತಿ ಅಂಕಲಗಿ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ಸೋಮನಗೌಡ ಕಲ್ಲೂರ ಮತ್ತಿತರರಿದ್ದರು.