ವೇತನ ಹೆಚ್ಚಿಸಿ, ಸೇವಾ ಸೌಲಭ್ಯ ಒದಗಿಸಿ

UDP-27-3-Protest
Published on

ಗ್ರಾಮಾಡಳಿತ ಅಧಿಕಾರಿಗಳ ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಬಳಿ ಮುಷ್ಕರ

ವಿಜಯವಾಣಿ ಸುದ್ದಿಜಾಲ ಉಡುಪಿ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಸೂಚನೆಯಂತೆ ಉಡುಪಿ ಜಿಲ್ಲಾ ಘಟಕವೂ ಸಹ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿತು.

ಮೌನ ಪ್ರತಿಭಟನೆ ನಡೆಸಿದ ಅಧಿಕಾರಿ ಹಾಗೂ ಸಿಬ್ಬಂದಿ, ಬೇಡಿಕೆಯ ವಿವಿಧ ಫಲಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಅಗತ್ಯ ಸೌಲಭ್ಯ ನೀಡಿ

ಸಂಘಟನೆಯ ಜಿಲ್ಲಾಧ್ಯಕ್ಷ ಭರತ್​ ಶೆಟ್ಟಿ ಮಾತನಾಡಿ, ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು 18 ಬಗೆಯ ವಿವಿಧ ಮೊಬೈಲ್​ ತಂತ್ರಾಂಶ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೂ ನಿಗದಿಪಡಿಸಬೇಕು. ಪ್ರಯಾಣ ಭತ್ಯೆ 500ರೂ.ನಿಂದ 3 ಸಾವಿರ ರೂ.ಗೆ ಹೆಚ್ಚಿಸಬೇಕು. ಕಚೇರಿ, ಮೊಬೈಲ್​, ಲ್ಯಾಪ್​ಟಾಪ್​ ಸಹಿತ ಅಗತ್ಯ ಮೂಲ ಸೌಲಭ್ಯ ಹಾಗೂ ಸೇವಾ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಬೇಡಿಕೆಗಳು

ಮೊಬೈಲ್​ ತಂತ್ರಾಂಶಗಳ ಕೆಲಸಕ್ಕೆ ಸಂಬಂಧಿಸಿ ಆಗಿರುವ ಎಲ್ಲ ಅಮಾನತು ತಕ್ಷಣ ರದ್ದು ಮಾಡಬೇಕು. ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕಬಾರದು. ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ, ರಾಜಸ್ವ ನಿರೀಕ್ಷಕ ಹುದ್ದೆಗಳಿಗೆ ತಕ್ಷಣವೇ ಪದೋನ್ನತಿ ನೀಡಬೇಕು. ಕೆಲಸದ ಅವಧಿಯ ಮೊದಲು ಹಾಗೂ ಮುಕ್ತಾಯ ಬಳಿಕದ ಎಲ್ಲ ಬಗೆಯ ವರ್ಚುಯಲ್​ ಸಭೆಗಳಿಗೆ ಕಡ್ಡಾಯ ನಿಷೇಧ ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವರಾಜ್​, ಕಾರ್ತಿಕೇಯ ಭಟ್​, ಸಹಕಾರ್ಯದರ್ಶಿ ವಿದ್ಯಾಶ್ರೀ ಹಾಗೂ ನೂರಾರು ಮಂದಿ ಸದಸ್ಯರು ಉಪಸ್ಥಿತರಿದ್ದರು.

ಸಾರ್ವಜನಿಕ ಸೇವೆ ಸ್ಥಗಿತ

ಗ್ರಾಮ ಆಡಳಿತಾಧಿಕಾರಿಗಳು ಪ್ರತಿ ತಾಲೂಕು ಕೇಂದ್ರದಲ್ಲಿ ಗುರುವಾರದಂದು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಶುಕ್ರವಾರದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿಯ ಪ್ರತಿಭಟನೆ ಆರಂಭಗೊಂಡಿದ್ದರಿಂದ ಮೊಬೈಲ್​ ಆ್ಯಪ್​, ವೆಬ್​ ಅಪ್ಲಿಕೇಶನ್​ ಹಾಗೂ ಲೇಖನಿ ಕರ್ತವ್ಯ ಸ್ಥಗಿತವಾಗಿದೆ. ಅಗತ್ಯತೆ ಇರುವ ಸಾರ್ವಜನಿಕರಿಗೆ ಸರ್ಕಾರಿ ಸೇವೆ ಸಿಗದಂತಾಗಿದೆ.

ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವಹಾನಿಯಾಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಬೇಕು. | ಪ್ರಮೋದ್​. ಜಿಲ್ಲಾ ಕಾರ್ಯದರ್ಶಿ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net