

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ಅಶೋಕನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಭಾನುವಾರ ಮುಕ್ತಾಯಗೊಂಡ 39 ನೇ ಕರ್ನಾಟಕ ರಾಜ್ಯ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಮತ್ತು ಆಯ್ಕೆ ಟ್ರಯಲ್ ನಲ್ಲಿ ಬೆಂಗಳೂರು ಗರಿಷ್ಠ 657 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
158 ಂಕಗಳನ್ನು ಪಡೆದ ಅತಿಥೇಯ ದಕ್ಷಿಣ ಕನ್ನಡ ಜಿಲ್ಲೆ ರನ್ನರ್ ಅಪ್ ಹಾಗೂ 90 ಅಂಕ ಗಳಿಸಿದ ಮೈಸೂರು ತೃತೀಯ ಸ್ಥಾನದಲ್ಲಿದೆ.
ನಾಲ್ಕು ಚಿನ್ನ ಗೆದ್ದಿರುವ ದಕ್ಷಿಣ ಕನ್ನಡದ ಮಹಮ್ಮದ್ ಶಾಮಿಲ್ 14 ರಿಂದ 17 ವರ್ಷ ದೊಳಗಿನ ವೈಯುಕ್ತಿಕ ವಿಭಾಗದಲ್ಲಿ ಚಾಂಪಿಯನ್ ಸ್ಥಾನ ಪಡೆದಿದ್ದಾರೆ. ಶಾಮಿಲ್ ಅವರು ಪಂದ್ಯಾಟ ನಡೆದ ನಾಲ್ಕು ದಿನಗಳು ನಿರಂತರ ಚಿನ್ನದ ಬೇಟೆ ನಡೆಸಿದರು.
ಮಹಿಳೆಯರ ವಿಭಾಗದಲ್ಲಿ ಮೂರು ಚಿನ್ನ ಹಾಗೂ ಒಂದು ಬೆಳ್ಳಿಯ ಜೊತೆಗೆ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಫ್ರಾನ್ಸಿಸ್ ಕೋನ್ಸೆಸೊ ಅವರ ಪುತ್ರಿ ಮಂಗಳೂರಿನ ಡ್ಯಾಶಲ್ ಅಮಾಂಡ ಕನ್ಸೆಸೊ ವೈಯುಕಿಕ ಚಾಂಪಿಯನ್ ಸ್ಥಾನ ಪಡೆದಿದ್ದಾರೆ.
ನಗರದಲ್ಲಿ ನ.9 ರಂದು ಆರಂಭಗೊಂಡ ನಾಲ್ಕು ದಿನಗಳ ರಾಜ್ಯ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ 16 ಜಿಲ್ಲೆಗಳಿಂದ 480 ಮಕ್ಕಳು ಭಾಗವಹಿಸಿದರು.
ಮೈಸೂರು, ಬೆಂಗಳೂರು (ನಗರ), ಬೆಂಗಳೂರು (ಗ್ರಾಮಾಂತರ), ಧಾರವಾಡ, ಬೆಳಗಾಂ, ಕಲಬುರ್ಗಿ, ಶಿವಮೊಗ್ಗ, ಮಂಡ್ಯ, ರಾಮನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹುಬ್ಬಳ್ಳಿ, ಗದಗ, ಕೋಲಾರ, ಮಂಡ್ಯ ಜಿಲ್ಲೆಯ ಮಕ್ಕಳು ಸ್ಪರ್ಧೆಯಲ್ಲಿದ್ದರು.
ಶಾಸಕ ಡಿ.ವೇದವ್ಯಾಸ ಕಾಮತ್, ಉದ್ಯಮಿ ಪಾಂಡುರಂಗ ಶೆಟ್ಟಿ, ಕರ್ನಾಟಕ ರಾಜ್ಯ ಸ್ಕೇಟಿಂಗ್ ಅಸೋಸಿಯೇಶನ್, ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಫ್ರಾನ್ಸಿಸ್ ಕೋನ್ಸೆಸೊ, ಮೈಸೂರು ಜಿಲ್ಲಾ ಅಸೋಸಿಯೇಶನ್ ಅಧ್ಯಕ್ಷ ಶ್ರೀಕಾಂತ್ ರಾವ್, ಕೋಶಾಧಿಕಾರಿ ಜಯರಾಜ್, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.