ಮಂಗಳೂರಿನಲ್ಲಿ ಸ್ಪೀಡ್ ರೋಲರ್ ಸ್ಕೇಟಿಂಗ್ ಕೂಟ; ನ. 9ರಿಂದ ರಾಜ್ಯಮಟ್ಟದ ಸ್ಪರ್ಧೆ, 480ಕ್ಕೂ ಅಧಿಕ ಮಕ್ಕಳು ಭಾಗಿ

ರಾಜ್ಯಮಟ್ಟದ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಆಯೋಜನೆಗೆ ಸಜ್ಜುಗೊಂಡಿರುವ ಮಂಗಳೂರು ಅಶೋಕನಗರದ ಹೊಯಿಗೆಬೈಲು ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿ ಮೈದಾನದಲ್ಲಿ ಮೇಯರ್ ಸುಧೀರ್ ಶೆಟ್ಟಿ ಅವರಿಂದ ಪರಿಶೀಲನೆ. ರಾಜ್ಯ ಸ್ಕೇಟಿಂಗ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಜಯಕುಮಾರ್, ದಕ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಕೋನ್ಸೆಸೊ, ಮೈಸೂರು ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ರಾವ್, ಕೋಶಾಧಿಕಾರಿ ಜಯರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ರಾಜ್ಯಮಟ್ಟದ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಆಯೋಜನೆಗೆ ಸಜ್ಜುಗೊಂಡಿರುವ ಮಂಗಳೂರು ಅಶೋಕನಗರದ ಹೊಯಿಗೆಬೈಲು ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿ ಮೈದಾನದಲ್ಲಿ ಮೇಯರ್ ಸುಧೀರ್ ಶೆಟ್ಟಿ ಅವರಿಂದ ಪರಿಶೀಲನೆ. ರಾಜ್ಯ ಸ್ಕೇಟಿಂಗ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಜಯಕುಮಾರ್, ದಕ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಕೋನ್ಸೆಸೊ, ಮೈಸೂರು ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ರಾವ್, ಕೋಶಾಧಿಕಾರಿ ಜಯರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಇಲ್ಲಿನ ಅಶೋಕನಗರದ ಹೊಯಿಗೆಬೈಲು ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ನವೆಂಬರ್ 9ರಿಂದ 12ರ ತನಕ 39ನೇ ರಾಜ್ಯಮಟ್ಟದ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ನಡೆಯಲಿದ್ದು, ಸಕಲ ಸಿದ್ಧತೆ ನಡೆದಿದೆ. ಮಂಗಳೂರಿನಲ್ಲಿ ಎರಡನೇ ಬಾರಿ ಈ ಕೂಟ ನಡೆಯುತ್ತಿದ್ದು 2017ರಲ್ಲಿ ಮೊದಲ ಸಲ ಆಯೋಜನೆಯಾಗಿತ್ತು.


ದಕ್ಷಿಣ ಕನ್ನಡ ರೋಲರ್ ಸ್ಪೋರ್ಟ್ಸ್ ಅಸೋಸಿಯೇಷನ್ ಆತಿಥ್ಯ ಹಾಗೂ ರಾಜ್ಯ ಸಂಘಟನೆ ನೇತೃತ್ವದಲ್ಲಿ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 480ಕ್ಕೂ ಅಧಿಕ ಮಕ್ಕಳು ಭಾಗವಹಿಸಲಿದ್ದಾರೆ. ಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅಂತಾರಾಷ್ಟ್ರೀಯ ಮಟ್ಟದ ಮೈದಾನ ಸಜ್ಜುಗೊಳಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ಕೇಟ್ ಸಿಟಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ನ.9ರಂದು ಸಾಯಂಕಾಲ 5.30ಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉದ್ಘಾಟಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು. ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಮಹಾನಗರ ಪಾಲಿಕೆ ಆಯುಕ್ತ ಸಿ.ಆನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದಕ್ಷಿಣ ಕನ್ನಡ ಉಪನಿರ್ದೇಶಕ ರವಿ ನಾಯಕ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.


ಕ್ವಾಡ್ ಮತ್ತು ಇನ್‌ಲೈನ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ರೋಡ್ ಇವೆಂಟ್ ಸುರತ್ಕಲ್ ಎನ್‌ಐಟಿಕೆ ಸಮೀಪದ ಮುಂಚೂರು ನಾರ್ಥರ್ನ್ ಸ್ಕೈ ಲೇಔಟ್‌ನಲ್ಲಿ ಹಾಗೂ ರಿಂಕ್ ಇವೆಂಟ್ ಅಶೋಕನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಆಯೋಜನೆಯಾಗಲಿದೆ. ವಿಶೇಷ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ ಎಂದು ರಾಜ್ಯ ಸ್ಕೇಟಿಂಗ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಜಯಕುಮಾರ್ ತಿಳಿಸಿದರು.

ಅಸೋಸಿಯೇಷನ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಕೋನ್ಸೆಸೊ, ಮೈಸೂರು ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷ ಶ್ರೀಕಾಂತ್ ರಾವ್, ಕೋಶಾಧಿಕಾರಿ ಜಯರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.


ವಯೋಮಿತಿ ವಿಭಾಗದಲ್ಲಿ ಸ್ಪರ್ಧೆ
ಕೆಡೆಟ್ (5-7, 7-9, 9-11), ಸಬ್ ಜೂನಿಯರ್ (11- 14), ಜೂನಿಯರ್ (14- 17), ಸೀನಿಯರ್ (17 ವಯೋಮಿತಿ ಮೇಲ್ಪಟ್ಟವರು) ಮತ್ತು ಮಾಸ್ಟರ್ (37 ವಯೋಮಿತಿ ಮೇಲ್ಪಟ್ಟವರು) ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ರಾಜ್ಯ ಸ್ಕೇಟಿಂಗ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಜಯಕುಮಾರ್ ತಿಳಿಸಿದರು. ರಾಜ್ಯ ಚಾಂಪಿಯನ್‌ಷಿಪ್ ಮತ್ತು ಆಯ್ಕೆ ಟ್ರಯಲ್‌ನಲ್ಲಿ ವಿಜೇತರಾದವರು ಚೆನ್ನೈನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುತ್ತಾರೆ ಎಂದು ಜಯಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net