

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಾಲ್ಕು ದಿನಗಳ 39 ನೇ ಕರ್ನಾಟಕ ರಾಜ್ಯ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಮತ್ತು ಆಯ್ಕೆ ಟ್ರಯಲ್‌ಗೆ ನಗರದ ಅಶೋಕನಗರದ ಹೊಯಿಗೆಬೈಲು ಫಲ್ಗುಣಿ ನದಿ ತಟದಲ್ಲಿರುವ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಗುರುವಾರ ಸಂಜೆ ಅದ್ದೂರಿ ಚಾಲನೆ ದೊರೆಯಿತು.
ಕಾರ್ಯಕ್ರಮದ ಅಧ್ಯಕ್ಷ, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಪಾಲಿಕೆ ಆಯುಕ್ತ ಸಿ.ಆನಂದ್ ಉದ್ಘಾಟನೆ ನಿರ್ವಹಿಸಿದರು. ಜಿಲ್ಲಾಧಿಕಾರಿ ಮುಳ್ಳೈ ಮುಗಿಲನ್ ಅವರ ಪತ್ನಿ ಅಶ್ವನಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಉಪ ನಿರ್ದೇಶಕ ರವಿ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.
ಆರಂಭದಲ್ಲಿ ಜರುಗಿದ ಆಕರ್ಷಕ ಪಥಸಂಚಲನದಲ್ಲಿ ರಾಜ್ಯದ 16 ಜಿಲ್ಲೆಗಳಿಂದ ಆಗಮಿಸಿದ 480 ಮಕ್ಕಳು ಭಾಗವಹಿಸಿದರು.
ವಿಶೇಷ ಮಕ್ಕಳಿಗಾಗಿ ಏರ್ಪಡಿಸಿದ ಪ್ರತೇಕ ವಿಭಾಗದ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದ ಮಕ್ಕಳು ಎಲ್ಲರೂ ಬೆರಗುಗೊಳಿಸುವ ಪ್ರದರ್ಶನ ನೀಡಿ ಮಿಂಚಿದರು.
ಮೈಸೂರು, ಬೆಂಗಳೂರು (ನಗರ), ಬೆಂಗಳೂರು (ಗ್ರಾಮಾಂತರ), ಧಾರವಾಡ, ಬೆಳಗಾಂ, ಕಲಬುರ್ಗಿ, ಶಿವಮೊಗ್ಗ, ಮಂಡ್ಯ, ರಾಮನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹುಬ್ಬಳ್ಳಿ, ಗದಗ, ಕೋಲಾರ, ಮಂಡ್ಯ ಜಿಲ್ಲೆಯ ಮಕ್ಕಳು ಸ್ಪರ್ಧೆಯಲ್ಲಿದ್ದಾರೆ.
ಕ್ವಾಡ್ ಮತ್ತು ಇನ್‌ಲೈನ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದ್ದು, ರೋಡ್ ಇವೆಂಟ್ ಸುರತ್ಕಲ್ ಎನ್‌ಐಟಿಕೆ ಸಮೀಪದ ಮುಂಚೂರು ನಾರ್ಥರ್ನ್ ಸ್ಕೈ ಲೇಔಟ್ ನಲ್ಲಿ ಹಾಗೂ ರಿಂಕ್ ಇವೆಂಟ್ ಮಂಗಳೂರು ಅಶೋಕನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಸ್ಕೇಟಿಂಗ್ ಅಸೋಸಿಯೇಶನ್, ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಫ್ರಾನ್ಸಿಸ್ ಕೋನ್ಸೆಸೊ, ಮೈಸೂರು ಜಿಲ್ಲಾ ಅಸೋಸಿಯೇಶನ್ ಅಧ್ಯಕ್ಷ ಶ್ರೀಕಾಂತ್ ರಾವ್, ಕೋಶಾಧಿಕಾರಿ ಜಯರಾಜ್ ಉಪಸ್ಥಿತರಿದ್ದರು.
ಫೋಟೋ
ಕರ್ನಾಟಕ ರಾಜ್ಯ ಸ್ಪೀಡ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಮತ್ತು ಆಯ್ಕೆ ಟ್ರಯಲ್‌ಗೆ ನಗರದ ಅಶೋಕನಗರದ ಹೊಯಿಗೆಬೈಲು ಫಲ್ಗುಣಿ ನದಿ ತಟದಲ್ಲಿರುವ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಗುರುವಾರ ಸಂಜೆ ಅದ್ದೂರಿ ಚಾಲನೆ ದೊರೆಯಿತು.