

ಚಿಕ್ಕಬಳ್ಳಾಪುರ: ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಸ್ಥಳೀಯ ಆಡಳಿತ ಸಂಸ್ಥೆಗಳ ನಾಮ ನಿರ್ದೇಶನ ಮಾಡದಿರುವುದು ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿವಿಧ ಸ್ಥಳೀಯ ಆಡಳಿತ ಸಂಸ್ಥೆ ಇಲ್ಲವೇ ಸರ್ಕಾರಿ ವಿವಿಧ ಸಮಿತಿಗಳಲ್ಲಿ ತಮಗೆ ನಾಮ ನಿರ್ದೇಶಿತ ಸ್ಥಾನಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಪಕ್ಷಗಳ ಕಾರ್ಯಕರ್ತರು, ಮುಖಂಡರಲ್ಲಿ ಇದ್ದು ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸಿದ್ದು, ಇನ್ನು ಎರಡೂವರೆ ವರ್ಷ ಮಾತ್ರ ಬಾಕಿಯಿದೆ. ಸರ್ಕಾರದ ಅವಧಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆಯೇ ಹೊರತು ತಾಲೂಕಿನ ನಗರ ಯೋಜನಾ ಪ್ರಾಧಿಕಾರ, ಗ್ಯಾರಂಟಿ ಅನುಷ್ಠಾನ ಸಮಿತಿ, ಬಗರು ಹುಕುಂ, ಆರಾಧನಾ, ಆರೋಗ್ಯ, ದೇವಾಲಯ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ನಾಮನಿರ್ದೇಶನ ಸ್ಥಾನಗಳನ್ನು ಭರ್ತಿ ಮಾಡಿಲ್ಲ. ಇದರಿಂದ ಅಧಿಕಾರದ ಕನಸ ಕಾಣುತ್ತಿದ್ದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ನಿರಾಶರಾಗಿದ್ದಾರೆ.
ಹಾಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಪ್ರಭಾವಿ ನಾಯಕರು ಬೆಂಬಲಿಗರಿಗೆ ಸ್ಥಾನ ಕಲ್ಪಿಸುವಂತೆ ಶಿಫಾರಸ್ಸು ಪತ್ರ ಕೊಡುತ್ತಿದ್ದು ಇದರ ಪೈಪೋಟಿಯಲ್ಲಿ ನಾಮ ನಿರ್ದೇಶನ ಮಾಡುವ ವಿಚಾರವೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ತಲೆಶೂಲೆಯಾಗಿದೆ. ಆದ್ದರಿಂದ ನಾಮನಿರ್ದೇಶನಕ್ಕೆ ಮೀನಾ ಮೇಷ ಎಣಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.