

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆಡಳಿತಾತ್ಮಕ ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ ವರ್ಗಾವಣೆ ಆಗುವ ಸಾಧ್ಯತೆ ಇದೆ.
ಈ ಹುದ್ದೆಗೆ ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಬಿ.ಪ್ರವೀಣ್ ಮತ್ತು ಇದೇ ವಿವಿ ಇತಿಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಗುರುಸಿದ್ದಯ್ಯ ಅವರನ್ನು ಪರಿಗಣಿಸಲಾಗಿದೆ.
ಈ ಉಭಯ ಪ್ರಾಧ್ಯಾಪಕರ ವಿರುದ್ಧ ಇಲಾಖಾ ವಿಚಾರಣೆ, ಕ್ರಿಮಿನಲ್ ಮೊಕದ್ದಮೆ, ನ್ಯಾಯಾಂಗ ವಿಚಾರಣೆ ಬಾಕಿ ಇದೆಯೇ ಎಂಬುದರ ಕುರಿತು ತುರ್ತು ವರದಿ ನೀಡಲು ಮೈಸೂರು ವಿಶ್ವವಿದ್ಯಾಲಯ ಕುಲಸಚಿವರಿಗೆ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಸಿ.ಶಶಿಕಲಾ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಕ್ತ ವಿವಿ ಕುಲಸಚಿವರು ಬದಲಾವಣೆ ಆಗುವುದು ದಟ್ಟವಾಗಿದೆ. ಪ್ರೊ.ಕೆ.ಬಿ.ಪ್ರವೀಣ್ ಅವರು ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವರಾಗಿದ್ದರು. ಇತ್ತೀಚೆಗೆ ಇವರನ್ನು ವರ್ಗಾವಣೆ ಮಾಡಿ ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್.ವಿಶ್ವನಾಥ್ ಅವರನ್ನು ಮೂರು ದಿನಗಳ ಹಿಂದೆ ನೇಮಕ ಮಾಡಲಾಗಿದೆ.