

ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಸೋಮವಾರ ಶುರುವಾಗಿದ್ದು, ಉಭಯ ಸದನಗಳಲ್ಲೂ ಮೃತ ಮೂವರು ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯ ಅಂಗೀಕಾರವಾದ ಬೆನ್ನಲ್ಲೇ ಪ್ರತಿಪಕ್ಷ ನಾಯಕರು ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ವಿಷಯ ಪ್ರಸ್ತಾಪಿಸಿ ಮಾತಿಗೆ ಅವಕಾಶ ಕೋರಿದರು. ಇದೇ ವೇಳೆ, ಯಾವ ನಿಯಮದ ಅಡಿ ಎಂಬುದನ್ನು ಉಲ್ಲೇಖಿಸಿ ಚರ್ಚೆಗೆ ಅವಕಾಶ ಕೋರುವಂತೆ ಆಡಳಿತ ಪಕ್ಷದ ಸದಸ್ಯರು ವಿಪಕ್ಷ ಸದಸ್ಯರನ್ನು ಆಗ್ರಹಿಸಿದರು. ಇದು ಗದ್ದಲಕ್ಕೆ ಕಾರಣವಾಗಿ ಉಭಯ ಸದನಗಳ ಕಲಾಪ ಕೆಲಕಾಲ ಮುಂದುವರಿಯಿತು.
ವಿಧಾನಪರಿಷತ್ನಲ್ಲಿ ಎಸ್.ಆರ್.ಪಾಟೀಲ್ ಅವರು ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ವಿಷಯ ಪ್ರಸ್ತಾಪಿಸಿದರು. ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರ ಬಗ್ಗೆ ಶಾಸಕ ಯತ್ನಾಳ್ ಲಘುವಾಗಿ ಮಾತನಾಡಿರುವುದು ಖಂಡನೀಯ, ಸ್ವಾತಂತ್ರ್ಯ ಚಳವಳಿ, ದೇಶಕ್ಕೆ ಮಾಡಿದ ಅಪಮಾನವೆಂದು ಕಿಡಿಕಾರಿದರು. ಸಹ ಸದಸ್ಯರು ಧ್ವನಿಗೂಡಿಸಿದರು.
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಯಾವ ನಿಯಮದಡಿ ಈ ವಿಷಯ ಪ್ರಸ್ತಾಪಿಸಲಾಗಿದೆ ಎಂದು ಕೇಳಿದರು. ಇದನ್ನು ಬೆಂಬಲಿಸಿದ ಆಡಳಿತ ಪಕ್ಷದ ಸದಸ್ಯರು ಮೊದಲಿಗೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಬೇಕು ಎಂದು ಪಟ್ಟು ಹಿಡಿದರು. ಎರಡು ಕಡೆ ಸದಸ್ಯರ ಮಧ್ಯೆ ಮಾತಿನ ಚಕಮಕಿ, ಸಾವರ್ಕರ್ ಬಗ್ಗೆ ಮಾತನಾಡಿದ್ದು ಸರಿಯೆ ? ಎಂದು ಪ್ರಶ್ನಿಸಿ, ಪಾಕಿಸ್ತಾನ ಜಿಂದಾಬಾದ್ ಎಂದ ಅಮೂಲ್ಯ ಜತೆಗೆ ದೊರೆಸ್ವಾಮಿ ಇದ್ದ ಫೋಟೋ ಪ್ರದರ್ಶಿಸಿದರು.
ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಪದೇ ಪದೆ ವಿನಂತಿಸಿದರು. ಕೊನೆಗೆ ಜೆಡಿಎಸ್ ನ ಹೊರಟ್ಟಿ ಸಲಹೆಯಂತೆ ಸಭಾನಾಯಕರು ಉತ್ತರಿಸುವುದಕ್ಕೆ ಅವಕಾಶ ಕಲ್ಪಿಸಿದರು. ಆದರೆ, ತೃಪ್ತರಾಗದ ಪ್ರತಿಪಕ್ಷ ನಾಯಕ ಮುಖ್ಯಮಂತ್ರಿಯಿಂದಲೇ ಉತ್ತರ ಬೇಕು ಎಂದು ಬಿಗಿ ನಿಲುವು ತಳೆದರು. ಸಭಾಪತಿ ಪೀಠದ ಮುಂದೆ ಧಾವಿಸಿ ಪ್ರತಿಭಟನೆಗೆ ಇಳಿದರೆ, ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಾಥ್ ನೀಡಿದರು.
ಮಾತಿನ ಕಲಹದ ಮಧ್ಯೆ ವಿರೋಧ ಪಕ್ಷಗಳಿಗೆ ಚರ್ಚಿಸಲು ಇಷ್ಟವಿಲ್ಲ, ಕಲಾಪ ಹಾಳು ಮಾಡುತ್ತಿದ್ದಾರೆ ಎಂದು ಸಭಾನಾಯಕ ಕೆಣಕಿದರೂ ಪ್ರತಿಭಟನಾ ನಿರತರು ಜಗ್ಗಲಿಲ್ಲ. ಸಭಾಪತಿ ಮನವಿಗೂ ಓಗೊಡಲಿಲ್ಲ. ಪ್ರತಿಭಟನೆ, ಮಾತಿನ ಚಕಮಕಿ ಮುಂದುವರಿದ ಕಾರಣ ಕಲಾಪವನ್ನು ಸಭಾಪತಿ ಒಂದು ತಾಸು ಮುಂದೂಡಿದರು.