

ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನ ಕಲ್ಮಹಳ್ಳಿ ಗ್ರಾಮದ ನೂರಾರು ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಿಜಯಕುಮಾರ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಲ್ಮಹಳ್ಳಿ ಶಿವಕುಮಾರ್ ನೇತೃತ್ವದಲ್ಲಿ ತಿ.ನರಸೀಪುರ ಸಮೀಪ ಸೋಮವಾರ ದಲಿತ ಮತ್ತು ವೀರಶೈವ ಲಿಂಗಾಯತ ಮುಖಂಡರು, ಕಾಂಗ್ರೆಸ್ ತೊರೆದು ಬಿಜೆಪಿಗೆ ಜೈ ಎಂದಿದ್ದಾರೆ. ಬಿಜೆಪಿ ಮುಖಂಡರು ಶಲ್ಯವನ್ನು ಹಾಕುವ ಮೂಲಕ ಪಕ್ಷಕ್ಕೆ ಅದ್ದೂರಿಯಾಗಿ ಬರಮಾಡಿಕೊಂಡರು.
ವಿಜಯಕುಮಾರ್ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಲಾಗುತ್ತಿದೆ. ಎಲ್ಲ ಗ್ರಾಮಗಳಲ್ಲೂ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ಸಿಗುತ್ತಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಜಯಭೇರಿ ಬಾರಿಸಲಿದ್ದಾರೆ.
ಈಗಾಗಲೇ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ದಲಿತರು ಹಾಗೂ ವೀರಶೈವ ಲಿಂಗಾಯತರು ಸೇರ್ಪಡೆಗೊಂಡಿದ್ದಾರೆ. ಸಾಕಷ್ಟು ಯುವಕರು ಸೋಮಣ್ಣ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಲು ಶ್ರಮಿಸುತ್ತಿದ್ದಾರೆ. ವರುಣ ಕ್ಷೇತ್ರದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ವಿ ಸೋಮಣ್ಣ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ವರುಣ ಕ್ಷೇತ್ರ ವ್ಯಾಪ್ತಿಯ ತಿ. ನರಸೀಪುರ ಕಸಬಾ ಹೋಬಳಿ ಬೈರಾಪುರ ಬಡಾವಣೆಯ ಬಿಜೆಪಿ ಬೂತ್ ಅಧ್ಯಕ್ಷ ದಿಲೀಪ್‌ಕುಮಾರ್ ಮೇಲೆ ಸೋಮವಾರ ಬೆಳಗ್ಗೆ ಕೆಲವರು ಹಲ್ಲೆ ನಡೆಸಿದ್ದಾರೆ. ದೊಣ್ಣೆಯಿಂದ ತಲೆಗೆ ಹೊಡೆಯಲಾಗಿದೆ. ಹಲ್ಲೆಗೆ ಒಳಗಾದ ದಿಲೀಪ್‌ಕುಮಾರ್ ಅವರನ್ನು ತಿ.ನರಸೀಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.