SSLCಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾಗೆ IAS ಅಧಿಕಾರಿಯಾಗುವ ಕನಸು; 625ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ

Ankita Konnuru
Published on

ಬಾಗಲಕೋಟೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾ.25ರಿಂದ ಏ.6ರವರೆಗೆ ನಡೆಸಿದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟವಾಗಿದೆ. ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬಾಗಲಕೋಟೆಯ ವಿದ್ಯಾರ್ಥಿನಿ 625ಕ್ಕೆ 625 ಅಂಕವನ್ನು ಪಡೆದುಕೊಂಡಿದ್ದಾಳೆ.

ಮೂಲತಃ ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದ ನಿವಾಸಿ ಆಗಿರುವ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು ಮಾತನಾಡಿ, ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಇಷ್ಟೇ ಮಾರ್ಕ್ಸ್‌ ಪಡೆಯಬೇಕೆಂದು ನನಗೆ ಯಾವುದೇ ಒತ್ತಡ ಇರಲಿಲ್ಲ. ನಮ್ಮ ಕುಟುಂಬಸ್ಥರು ಓದು ಎಂದು ಯಾವುದೇ ಒತ್ತಡ ಹಾಕಲಿಲ್ಲ. ಪಿಯುಸಿಯಲ್ಲಿ ವಿಜ್ಞಾನ ವಿಭಾಗ ತೆಗೆದುಕೊಳ್ಳುವ ಆಸೆ ಇದೆ. IAS ಅಧಿಕಾರಿಯಾಗುವ ಕನಸು ಹೊಂದಿದ್ದೇನೆ ಎಂದಿದ್ದಾರೆ.

ಹಾಸ್ಟೆಲ್‌ನಲ್ಲಿ ಓದುತ್ತಿದ್ರಿಂದ ಮೊಬೈಲ್ ಬಳಕೆಗೆ ಅವಕಾಶ ಇರಲಿಲ್ಲ. ಪಠ್ಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದಾಗ ಮಾತ್ರ ಯೂಟ್ಯೂಬ್‌ನಲ್ಲಿ ಸರ್ಚ್‌ ಮಾಡುತ್ತಿದ್ದೆ. ಹಾರ್ಡ್‌ವರ್ಕ್ ಮಾಡಿದ್ರೆ ಸಕ್ಸಸ್‌ ಆಗಲು ಸಹಾಯವಾಗುತ್ತೆ ಎಂದು ಹೇಳಿದ್ದಾರೆ.

2024ರ ಮಾ.25ರಿಂದ 2024ರ ಏಪ್ರಿಲ್ 6ರವರೆಗೆ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ-1ರಲ್ಲಿ 441910 ವಿದ್ಯಾರ್ಥಿಗಳು, 428058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 6,31,204 ವಿದ್ಯಾರ್ಥಿಗಳು ಪಾಸ್​​ ಆಗಿದ್ದು ಈ ಬಾರಿ ರಾಜ್ಯಾದ್ಯಂತ 76.91ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಉಡುಪಿ ಪ್ರಥಮ ಸ್ಥಾನ(94%) ಪಡೆದಿದೆ. ದ್ವಿತೀಯ ಸ್ಥಾನ ದಕ್ಷಿಣ ಕನ್ನಡ(92.12%) ಜಿಲ್ಲೆಗೆ ಸಿಕ್ಕಿದ್ದು ಶಿವಮೊಗ್ಗ (88.67%) ಮೂರನೇ ಸ್ಥಾನ ಪಡೆದಿದೆ. 7 ವಿದ್ಯಾರ್ಥಿಗಳಿಗೆ 625ಕ್ಕೆ 624 ಅಂಕಗಳು ಬಂದಿವೆ. ದಕ್ಷಿಣ ಕನ್ನಡದ ಚಿನ್ಮಯ್​, ​ ಚಿಕ್ಕೊಡಿಯ ಸಿದ್ದಾಂತ್, ಮಧುಗಿರಿಯ ಹರ್ಷಿತಾ ಡಿ. ಎಂ, ಬೆಂಗಳೂರಿನ ವೇದಾ ಪಿ ಶೆಟ್ಟಿ, ಉಡುಪಿಯ ಸಹನಾ, ಶಿರಸಿಯ ದರ್ಶನ್​​, ಚಿನ್ಮಯ್​, ಸಿದ್ದಾಂತ್​ ಕೂಡಾ ಡ್ವೀತಿಯ ಸ್ಥಾನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net