ಜ.17ರಿಂದ 23 : ಕರ್ನಾಟಕ ಕ್ರೀಡಾಕೂಟ

Screenshot_20250116_174415_Samsung Notes
Published on


ಮಂಗಳೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ‘ಕರ್ನಾಟಕ ಕ್ರೀಡಾಕೂಟ’ಕ್ಕೆ 2024-25ನೇ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ. ರಾಜ್ಯ ಸರ್ಕಾರ ಒದಗಿಸಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜ. 17ರಂದು ಸಾಯಂಕಾಲ 5ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭ ಜ. 23ರಂದು ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು,.
ಒಟ್ಟು 25 ಕ್ರೀಡೆಗಳಲ್ಲಿ 3750 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಮಂಗಳೂರಿನಲ್ಲಿ 12 ಕ್ರೀಡೆಗಳು, ಉಡುಪಿ ಮತ್ತು ಮಣಿಪಾಲದಲ್ಲಿ 11 ಕ್ರೀಡೆಗಳು ಹಾಗೂ ಶೂಟಿಂಗ್ ಹಾಗೂ ಜಿಮ್ನಾಸ್ಟಿಕ್ಸ್ ಬೆಂಗಳೂರಿನಲ್ಲಿ ನಡೆಯಲಿದೆ. ತಲಾ 621 ಚಿನ್ನ ಹಾಗೂ ಬೆಳ್ಳಿ ಹಾಗೂ 817 ಕಂಚಿನ ಪದಕಗಳಿಗಾಗಿ ಸ್ಪರ್ಧೆ ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಂಗವಾಗಿ ಸಂಗೀತ ನಿರ್ದೇಶಕ ಗುರುಕಿರಣ್ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕರ್ನಾಟಕ ಕ್ರೀಡಾಕೂಟದ ವಿಶೇಷ ಮಂಗಳಾ ಕ್ರೀಡಾಂಗಣದಲ್ಲಿ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಆಯೋಜಿಸಲಾಗಿದೆ. ಮಂಗಳಾ ಕ್ರೀಡಾಂಗಣದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಸುಮಾರು 94 ಲಕ್ಷ ರೂ. ವೆಚ್ಚದಲ್ಲಿ ನಿರ್ವಹಿಸಲಾಗಿದ್ದು, ಕ್ರೀಡಾಂಗಣದ ನಿರ್ವಹಣೆಗಾಗಿ 3 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿದ್ದು, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರ ಮಟ್ಟದ ಕಬಡ್ಡಿ ಹಾಗೂ ಬ್ಯಾಡ್ಮಿಂಟನ್ ಕ್ರೀಡಗಳಿಗೆ ಪೂರಕವಾಗಿ ಸಜ್ಜುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಕಳೆದ ವರ್ಷ ದಸರಾ ಕ್ರೀಡಾಕೂಟದ ಜತೆಗೆ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ವರ್ಷದಿಂದ ಪ್ರತ್ಯೇಕವಾಗಿ ಕರ್ನಾಟಕ ಕ್ರೀಡಾಕೂಟ ಹೆಸರಿನಲ್ಲಿ ಆಯ್ದ ಉನ್ನತ ಮಟ್ಟದ ಕ್ರೀಡಾಪಟುಗಳೊಂದಿಗೆ ಒಲಿಂಪಿಕ್ ಮಾದರಿಯಲ್ಲಿ ಕ್ರೀಡಾಕೂಟ
ಆಯೋಜಿಸಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳ ಸಮಗ್ರ ಮಾಹಿತಿಯೊಂದಿಗೆ, ಫಲಿತಾಂಶ ಕೂಡಾ ವೆಬ್‌ಸೈಟ್‌ನಲ್ಲಿ
ಲಭ್ಯವಾಗುವಂತೆ ಕ್ರಮ ವಹಿಸಲಾಗಿದೆ. ಎಲ್ಲಾ ಆಟಗಾರರಿಗೆ ಕ್ಯೂಆರ್ ಕೋಡ್ ಹೊಂದಿರುವ ಐಡಿ ಕಾರ್ಡ್ ವಿತರಿಸುವ ವ್ಯವಸ್ಥೆಯಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ತಿಳಿಸಿದರು.
ಜಿ.ಪಂ. ಸಿಇಒ ಡಾ. ಆನಂದ್, ಯುವ ಜನ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ, ಮನಪಾ ಆಯುಕ್ತ ಆನಂದ್ ಸಿ.ಎಲ್.ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net