ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕಿಲ್ಲ!

Kaveri-Water
Published on

ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಅಗತ್ಯ ಇಲ ಎಂದು ರಾಜ್ಯ ಹಿರಿಯರ ಅಭಿಯಂತರರ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

ಸಂದ ಅಧ್ಯಕ್ಷ, ರಾಜ್ಯ ಸರ್ಕಾರದ ನಿವೃತ್ತ ಅಧಿಕಾರಿ ಕ್ಯಾಪ್ಟನ್​ ಎಸ್​.ರಾಜ ರಾವ್​ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕುಡಿಯಲು ಹಾಗೂ ನೀರಾವರಿ ವ್ಯವಸ್ಥೆಗಾಗಿ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿರುತ್ತದೆ. ಹೀಗಿರುವಾಗ ತಮಿಳುನಾಡು, ನಿಯಂತ್ರಣ ಪ್ರಾಧಿಕಾರ ಕೊರತೆ ನೀಗಿಸಲು ಸಂಗ್ರಹಣೆಯಲ್ಲಿರುವ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದರು.

ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿದ್ದು, ವಾಡಿಕೆಯಷ್ಟು ಇನ್ನೂ ಮಳೆಯಾಗಿಲ್ಲ. ರಾಜ್ಯದ ಜಲಾಶಯಗಳಲ್ಲಿ ನೀರಿನ ಶೇಖರಣೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರವು ವಿಪತ್ತು ಪರಿಹಾರ ನಿಧಿ ಎಂಬ ಪ್ರತ್ಯೇಕ ನಿಧಿಯನ್ನು ಹೊಂದಿದೆ. ಇದರ ಮೊತ್ತವನ್ನು ಹೆಚ್ಚಿಸಿ ಕಡಿಮೆ ಮಳೆಯಾದ ರಾಜ್ಯಕ್ಕೆ ಪರಿಹಾರ ಘೋಷಿಸುವ ಬಗ್ಗೆ ಚಿಂತಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಜೂನ್​ನಿಂದ ಜನವರಿವರೆಗೂ ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣವನ್ನು ಕಾವೇರಿ ಪ್ರಾಧಿಕಾರ ಹೊಸದಾಗಿ ನಿಗದಿಪಡಿಸಬೇಕು. ಈಗಾಗಲೇ ನಿಗದಿಪಡಿಸಿರುವ ನೀರಿನ ಪ್ರಮಾಣವನ್ನು ಮಾರ್ಪಡಿಸಿ, ಕಬಿನಿ ಮತ್ತು ಕೆಆರ್​ಎಸ್​ ಅಣೆಕಟ್ಟುಗಳಿಂದ ಮಾತ್ರ ಹರಿಸಲು ಹೊಸ ಪ್ರಮಾಣವನ್ನು ನಿಗದಿಗೊಳಿಸಬೇಕು. ಜತೆಗೆ ತಮಿಳುನಾಡು ಉಪಯೋಗಿಸುತ್ತಿರುವ ಭೂ ಜಲದ ಮಾಹಿತಿಯನ್ನು ಪ್ರತಿ ತಿಂಗಳು ಕಾವೇರಿ ಪ್ರಾಧಿಕಾರದ ಮೂಲಕ ಹಂಚಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net