

ಮೈಸೂರು: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕೆಲವು ಮುಸ್ಲಿಂ ದುಷ್ಕರ್ಮಿಗಳು ನಡೆಸಿದ ಕಲ್ಲು ತೂರಾಟ ಖಂಡಿಸಿ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಯಿತು.
ಮೆರವಣಿಗೆ ಬರುತ್ತಿದ್ದಂತೆ ಪೂರ್ವ ನಿಯೋಜಿತವಾಗಿ ಮಸೀದಿಯಲ್ಲಿ ಯೋಜನೆ ರೂಪಿಸಿ ಕಲ್ಲುಗಳನ್ನು ಇಟ್ಟುಕೊಂಡು, ರಸ್ತೆಯ ಎಲ್ಲ ಲೈಟ್‌ಗಳನ್ನು ಹಾಗೂ ಮಸೀದಿಯ ಲೈಟ್‌ಗಳನ್ನು ಆಫ್ ಮಾಡಿ, ಏಕಾಏಕಿ ಕಲ್ಲುಗಳನ್ನು ತೂರಿದ್ದಾರೆ. ಈ ಘಟನೆಯಿಂದ ಹಲವಾರು ಹಿಂದುಗಳಿಗೆ ಹಾಗೂ ಪೊಲೀಸರಿಗೆ ಗಾಯವಾಗಿದೆ. ಕೂಡಲೇ ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಆಗ್ರಹಿಸಿದರು.
ತಲತಲಾಂತರಗಳಿಂದ ರಾಜ್ಯದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮಾಡುವುದು ಸಾರ್ವಜನಿಕ ರಸ್ತೆಯಲ್ಲಿಯೇ ಹೊರತು, ಯಾವ ಮುಸ್ಲಿಮರ ರಸ್ತೆಯಲ್ಲಿ ಅಲ್ಲ. ಮುಸ್ಲಿಮರ ಹಬ್ಬಗಳು ನಮ್ಮ ದೇಶದಲ್ಲಿ ಯಾವುದೇ ಗಲಾಟೆಗಳಿಲ್ಲದೆ ನಡೆಯುತ್ತವೆ. ಆದರೆ ದೇಶದ ಬಹುಸಂಖ್ಯಾತ ಹಿಂದುಗಳ ಹಬ್ಬಗಳಿಗೆ ಪದೇ ಪದೆ ತೊಂದರೆ ಕೊಡುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ ಎಂದರು.
ಕೂಡಲೇ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ಮತ್ತೆ ರಾಜ್ಯದಲ್ಲಿ ಈ ರೀತಿ ಪ್ರಕರಣಗಳು ಪುನರಾವರ್ತನೆ ಆಗದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್, ಪ್ರಜೀಶ್, ಮಧುವನ ಚಂದ್ರು, ಗಿರೀಶ್, ಕೃಷ್ಣಪ್ಪ, ಶಿವಲಿಂಗಯ್ಯ, ವರಕೂಡು ಕೃಷ್ಣೆಗೌಡ, ನೇಹ, ಭಾಗ್ಯಮ್ಮ, ಶೋಭಾರಾಣಿಗೌಡ, ಹೊನ್ನೇಗೌಡ, ಪದ್ಮ, ತಾಯೂರು ಗಣೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.