

ಮೈಸೂರು: ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದಿಂದ ಆಯೋಜಿಸಿರುವ ಆ್ಯಪ್ ಆಧಾರಿತ ಆರೋಗ್ಯ ಮಾಹಿತಿಯನ್ನೊಳಗೊಂಡ ‘ದೇಶ್ ಕಿ ಪ್ರಕೃತಿ ಪರೀಕ್ಷ ಅಭಿಯಾನ’ದಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ ದೊರೆತಿದೆ.
2024ರ ನವೆಂಬರ್ 26ರಿಂದ ಡಿಸೆಂಬರ್ 25ರ ವರೆಗೆ ಪ್ರಥಮ ಹಂತದಲ್ಲಿ ಒಂದು ಕೋಟಿ ಗುರಿಯನ್ನು ಒಂದು ತಿಂಗಳ ಒಳಗಾಗಿ ತಲುಪುವ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿತ್ತು.
ಈ ಅಭಿಯಾನದಲ್ಲಿ ಕರ್ನಾಟಕ, 1.30 ಕೋಟಿ ಜನರಿಗೆ ಪ್ರಕೃತಿ ಪರೀಕ್ಷೆ ಮಾಡುವುದರ ಮೂಲಕ 5 ಗಿನ್ನೆಸ್ ವಿಶ್ವ ದಾಖಲೆಗಳನ್ನು ಪೂರೈಸುವುದರ ಮೂಲಕ ಪ್ರಥಮ ಹಂತದ ದೇಶ್ ಕಿ ಪ್ರಕೃತಿ ಪರೀಕ್ಷ ಅಭಿಯಾನ ಅತ್ಯಂತ ಯಶಸ್ವಿಯಾಗಿ ಪೂರೈಸಿದೆ.
ಈ ಅಭಿಯಾನದಲ್ಲಿ ಮಹಾರಾಷ್ಟ್ರ ರಾಜ್ಯ ಪ್ರಥಮ ಸ್ಥಾನ ಪಡೆದರೆ ಕರ್ನಾಟಕ 23 ಲಕ್ಷಕ್ಕಿಂತ ಹೆಚ್ಚು ಜನರಿಗೆ ಪ್ರಕೃತಿ ಪರೀಕ್ಷೆ ನಡೆಸುವ ಮೂಲಕ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಮುಂಬಯಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಥಮ ಹಂತದ ದೇಶ್ ಕಿ ಪ್ರಕೃತಿ ಪರೀಕ್ಷ ಅಭಿಯಾನದ ಸಮಾರೋಪದಲ್ಲಿ ಕೇಂದ್ರ ಆಯುಷ್ ಇಲಾಖೆ ಸಚಿವ ಪ್ರಕಾಶ್ ರಾವ್ ಜಾದವ್ ನೇತೃತ್ವದಲ್ಲಿ ಕರ್ನಾಟಕ ತಂಡಕ್ಕೆ ಬಹುಮಾನ ವಿತರಿಸಿದರು.
ಕರ್ನಾಟಕದ ಆಯುಷ್ ಇಲಾಖೆಯ ಅಭಿಯಾನದ ಸಂಯೋಜಕರಾದ ಡಾ.ಲಕ್ಷ್ಮೀನಾರಾಯಣ ಶೆಣೈ, ಡಾ. ಹರೀಶ್ ಬಾಬು, ಡಾ. ಸಂತೋಷ್ ಯಡಹಳ್ಳಿ, ಡಾ. ಸುಹಾಸ್ ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿದರು.
ಇದೇ ಸಂಧರ್ಭದಲ್ಲಿ ಆಯುರ್ವೇದ ಕಾಲೇಜು ವಿಭಾಗದಲ್ಲಿ ಜೆ.ಜಿ. ಕೋ-ಆಪರೇಟಿವ್ ಸೊಸೈಟಿ ಆಯುರ್ವೇದ ಮೆಡಿಕಲ್ ಕಾಲೇಜು, ಘಟಪ್ರಭಾ, ಬೆಳಗಾವಿ ಜಿಲ್ಲೆ ಹಾಗೂ ರಾಜೀವ್ ಗಾಂಧಿ ಎಜುಕೇಷನಲ್ ಸೊಸೈಟಿ ಆಯುರ್ವೇದ ಮೆಡಿಕಲ್ ಕಾಲೇಜು, ರೋಣ, ಗದಗ ಜಿಲ್ಲೆಯು ಸಹ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿ ದೇಶ್ ಕಿ ಪ್ರಕೃತಿ ಪರೀಕ್ಷ ಅಭಿಯಾನದ ಯಶಸ್ವಿ ಕಾಲೇಜುಗಳಾಗಿ ಹೊರಹೊಮ್ಮಿದವು.