ಮೂವರು ಸಾಧಕರು ಮತ್ತು ಎಂ.ಎಚ್.ಚನ್ನೇಗೌಡ ಸಂಸ್ಥೆಗೆ ಪ್ರಶಸ್ತಿ: ಕರ್ನಾಟಕ ಸಂಘದಿಂದ ಆಯ್ಕೆ

Karnataka Sangha press conference Mandya
Published on

ಮಂಡ್ಯ: ಕರ್ನಾಟಕ ಸಂಘದಿಂದ ಕೊಡಮಾಡುವ ‘ಗಾಂಧಿವಾದಿ ಬಿ.ಎಚ್.ಮಂಗೇಗೌಡ ಶಿಕ್ಷಣ ಪ್ರಶಸ್ತಿ’ಗೆ ಮದ್ದೂರಿನ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ, ‘ಮಾದರಿ ರೈತ ಮಹಿಳೆ ನಂಜಮ್ಮ ಸಮಾಜಸೇವಾ ಪ್ರಶಸ್ತಿ’ಗೆ ಮಂಡ್ಯ ತಾಲೂಕು ದೊಡ್ಡಗರುಡನಹಳ್ಳಿ ಜೆ.ರಾಜಶೇಖರಯ್ಯ, ‘ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಶಿಕ್ಷಕ ಪ್ರಶಸ್ತಿ’ಗೆ ಮದ್ದೂರು ತಾಲೂಕು ನಗರಕೆರೆ ಗ್ರಾಮದ ಎನ್.ಎಂ.ಶಿವಪ್ರಕಾಶ್ ಹಾಗೂ ‘ಮೋಟೇಗೌಡ ಕೃಷಿಕ ಪ್ರಶಸ್ತಿ’ಗೆ ಮದ್ದೂರು ತಾಲೂಕು ಕೊಪ್ಪ ಹೋಬಳಿ ತಗ್ಗಹಳ್ಳಿ ಗ್ರಾಮದ ಬಿಳಿಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಅ.22ರಂದು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪುರಸ್ಕೃತರಿಗೆ ತಲಾ 15 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಪರವಾಗಿ ಗೌರವಾಧ್ಯಕ್ಷ ಗಾಂಧಿವಾದಿ ಕೆ.ಟಿ.ಚಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇದರೊಟ್ಟಿಗೆ ದಿವಂಗತ ಪಿಡಿಒ ಅರುಣ ಸ್ಮರಣಾರ್ಥ ಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ ನಗದು ಪುರಸ್ಕಾರ ನೀಡಲಾಗುವುದು ಎಂದರು.

ಅಂದು ಬೆಳಗ್ಗೆ 11ಗಂಟೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆಯಲ್ಲಿ ರಾಜ್ಯ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಪ್ರಶಸ್ತಿ ಪ್ರದಾನ ಮಾಡುವರು. ಲೇಖಕ ಲೋಕೇಶ್ ಚಂದಗಾಲು ಅಭಿನಂದನಾ ನುಡಿಗಳನ್ನಾಡುವರು. ರಾಜ್ಯ ಎಸ್ಸಿ ಮತ್ತು ಎಸ್ಟಿ ಆಯೋಗದ ಅಧ್ಯಕ್ಷ ಎಂ.ಎಸ್.ಮೂರ್ತಿ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಗ್ರಾಮ ವಿದ್ಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ರಘು ಉಪಸ್ಥಿತರಿರುವರು ಎಂದು ವಿವರಿಸಿದರು.

ಸಂಘದ ಪ್ರಧಾನ ಪೋಷಕ ಕೆ.ಟಿ.ಶ್ರೀಕಂಠೇಗೌಡ, ಕಾರ್ಯದರ್ಶಿ ಲೋಕೇಶ್ ಚಂದಗಾಲು, ನಿರ್ದೇಶಕರಾದ ನಾಗಪ್ಪ, ಮೋಹನ್ ಕುಮಾರ್, ಪುಟ್ಟಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net