ಕರ್ನಾಟಕ ಸಂಘದ ಪ್ರಶಸ್ತಿಗೆ ಮೂವರು ಆಯ್ಕೆ: ಕಾರ್ಯದರ್ಶಿ ಚಂದಗಾಲು ಲೋಕೇಶ್ ಮಾಹಿತಿ

Karnataka Sangh Press Conference Mandya
Published on

ಮಂಡ್ಯ: ಕರ್ನಾಟಕ ಸಂಘದ ವತಿಯಿಂದ ಕೊಡಮಾಡುವ ಗಾಂಧಿವಾದಿ ಬಿ.ಎಚ್.ಮಂಗೇಗೌಡ ಶಿಕ್ಷಣ ಪ್ರಶಸ್ತಿಗೆ ಪಾಂಡವಪುರದ ವಿದ್ಯಾ ಪ್ರಚಾರ ಸಂಘದ ಪರವಾಗಿ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು, ನಂಜಮ್ಮ ಮೋಟೇಗೌಡ ಸಮಾಜಸೇವಾ ಪ್ರಶಸ್ತಿಗೆ ಮಂಡ್ಯ ತಾಲೂಕಿನ ಮಂಗಲ ಗ್ರಾಮದ ಎಂ.ಯೋಗೀಶ್ ಹಾಗೂ ಕೆ.ಟಿ.ಶ್ರೀಕಂಠೇಗೌಡ ಶಿಕ್ಷಕ ಪ್ರಶಸ್ತಿಗೆ ಮೈಸೂರು ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಸೋಮಣ್ಣ ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ಕಾರ್ಯದರ್ಶಿ ಚಂದಗಾಲು ಲೋಕೇಶ್, ಅ.19ರಂದು ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಮೂವರಿಗೂ ತಲಾ 15 ಸಾವಿರ ರೂ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂತೆಯೇ ಮದ್ದೂರು ತಾಲೂಕು ಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿಗಳಾದ ಎನ್.ಆರ್.ಯಶಸ್ವಿನಿ ಮತ್ತು ಯಾಸ್ಮಿನ್‌ತಾಜ್ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟಿ.ಕೆ.ಅಮೃತಾ ಹಾಗೂ ಮನುಜಾ ಅವರಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.

ಅಂದು ಸಂಜೆ 4ಗಂಟೆಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಘದ ಕಾರ್ಯದರ್ಶಿ ಚಂದಗಾಲು ಲೋಕೇಶ್ ಅಭಿನಂದನಾ ನುಡಿಗಳನ್ನಾಡಲಿದ್ದು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು, ಗ್ರಾಮ ವಿದ್ಯಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಬಿ.ಎಂ.ರಘು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ನಿರ್ದೇಶಕರಾದ ನಾಗಪ್ಪ, ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net