

ಮಂಡ್ಯ: ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಜೂ.20ರಂದು ಸಂಜೆ 5ಗಂಟೆಗೆ ಪಾರ್ವತಮ್ಮ ಮತ್ತು ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿಗಳ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಉಪಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ತಿಳಿಸಿದರು.
ಪತ್ರಕರ್ತರಾದ ರಾಜು ಮಳವಳ್ಳಿ ಹಾಗೂ ನಂಜೇಗೌಡ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಹಪ್ರಾಧ್ಯಾಪಕ ಡಾ.ಶಾಂತರಾಜು ಅಭಿನಂದನಾ ನುಡಿಯನ್ನಾಡಲಿದ್ದು, ಕರ್ನಾಟಕ ಸಂಘದ ಪ್ರಧಾನ ಪೋಷಕ ಎಂ.ಶ್ರೀನಿವಾಸ್ ಹಾಗೂ ದತ್ತಿದಾನಿ ಪಿ.ಜೆ.ಚೈತನ್ಯಕುಮಾರ್ ಉಪಸ್ಥಿತರಿರಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಜಿಲ್ಲೆಯ ಹಿರಿಯ ರಾಜಕಾರಣಿ ಮಳವಳ್ಳಿಯ ಎಚ್.ವಿ.ವೀರೇಗೌಡ ಅವರ ಜೀವನದ ಹಳ್ಳಿಗಾಡಿನ ರೂವಾರಿ ಕೃತಿ ಬಿಡುಗಡೆ ಸಮಾರಂಭ ಜೂ.22ರಂದು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಕೊಮ್ಮೇರಹಳ್ಳಿಯ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಹಾಗೂ ನಿವೃತ್ತ ಪ್ರಾಧ್ಯಾಪಕ ಟಿ.ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಭಾಗವಹಿಸಲಿದ್ದು, ಕೃತಿಯ ಕರ್ತೃ ಡಾ.ಎನ್.ಎಸ್.ದೇವಿಕಾ, ಎಚ್.ವಿ.ವೀರೇಗೌಡರ ಹಿರಿಯ ಪುತ್ರ ಎಚ್.ವಿ.ಜಯರಾಂ ಉಪಸ್ಥಿತರಿರುವರು ಎಂದರು.
ಕರ್ನಾಟಕ ಸಂಘದ ಖಜಾಂಚಿ ಮಂಜುಳಾ ಉದಯಶಂಕರ್, ನಿರ್ದೇಶಕರಾದ ಮೋಹನ್‌ಕುಮಾರ್, ನಾಗರತ್ನ ಇದ್ದರು.