ಡಾ.ಭೈರಮಂಗಲ ರಾಮೇಗೌಡ, ತೈಲೂರು ವೆಂಕಟಕೃಷ್ಣಗೆ ಪ್ರಶಸ್ತಿ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾಹಿತಿ

Karnataka Sanga press conference mandya
Published on

ಮಂಡ್ಯ: ಕರ್ನಾಟಕ ಸಂಘದಿಂದ ಕೊಡಮಾಡುವ ಡಾ.ರಾಗೌ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ.ಭೈರಮಂಗಲ ರಾಮೇಗೌಡ ಹಾಗೂ ಕೆ.ಸಿಂಗಾರಿಗೌಡ ಪುಸ್ತಕ ಪ್ರಶಸ್ತಿಗೆ ಸಾಹಿತಿ ತೈಲೂರು ವೆಂಕಟಕೃಷ್ಣ ಆಯ್ಕೆಯಾಗಿದ್ದಾರೆ.

ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ವತಿಯಿಂದ ನ.20ರಂದು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಈ ಇಬ್ಬರಿಗೆ ತಲಾ 15 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಸಂಜೆ 5.30ಕ್ಕೆ ಆಯೋಜಿಸಿರುವ ಸಮಾರಂಭದ ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಧ್ಯಕ್ಷತೆ ವಹಿಸುವರು. ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ನಾಗೇಶ್ ವಿ.ಬೆಟ್ಟಕೋಟೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಹಿತಿ ಡಾ.ರಾಗೌ ಅವರು ಸಮಾರಂಭದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಹಸ್ತಪ್ರತಿ ಸಮ್ಮೇಳನ: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ಸಂಘ, ಮದ್ದೂರು ಎಚ್.ಕೆ.ವೀರಣ್ಣಗೌಡ ಕಾಲೇಜು ವತಿಯಿಂದ ನ. 17, 18ರಂದು ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಖಿಲ ಕರ್ನಾಟಕ 20ನೇ ಹಸ್ತಪ್ರತಿ ಸಮ್ಮೇಳನ ಆಯೋಜಿಸಲಾಗಿದೆ. ಬೆಳಗ್ಗೆ 10.30ಕ್ಕೆ ಸಮಾರಂಭವನ್ನು ನಿವೃತ್ತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಉದ್ಘಾಟಿಸುವರು. ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸುವರು. ಹಿರಿಯ ವಿದ್ವಾಂಸ ಡಾ.ರಾಮೇಗೌಡ ಸಮ್ಮೇಳನಾಧ್ಯಕ್ಷರ ನುಡಿಯನ್ನಾಡುವರು. ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದರು.

ಡಾ.ಎಫ್.ಟಿ.ಹಳ್ಳಿಕೇರಿ ಅವರ ಹಸ್ತಪ್ರತಿ ವ್ಯಾಸಂಗ-32 ಹಾಗೂ ಡಾ.ಗುರುಪಾದ ಮರಿಗುದ್ದಿ ಅವರ ಡಾ.ರಾಗೌ ಸಾಹಿತ್ಯ ಮಂಥನ ಪುಸ್ತಕಗಳನ್ನು ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಂ.ತಳವಾರ ಬಿಡುಗಡೆ ಮಾಡುವರು. ಯುವ ಮುಖಂಡ ಗುರುಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.

ಕರ್ನಾಟಕ ಸಂಘದ ಕಾರ್ಯದರ್ಶಿ ಸೋಮಶೇಖರ್, ನಿರ್ದೇಶಕ ನಾಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net